'ನಗರ ನಕ್ಸಲರು' ಪದವನ್ನು ಸರಕಾರ ಬಳಸುತ್ತಿಲ್ಲ: ರಾಜ್ಯಸಭೆಗೆ ತಿಳಿಸಿದ ಗೃಹ ಸಚಿವಾಲಯ

Update: 2020-03-12 10:49 GMT

ಹೊಸದಿಲ್ಲಿ :  ಭಾರತ ಸರಕಾರದ ಗೃಹ ವ್ಯವಹಾರಗಳ ಸಚಿವಾಲಯವು 'ನಗರದ ನಕ್ಸಲರು' ಎಂಬ ಪದವನ್ನು ಬಳಕೆ ಮಾಡುತ್ತಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯೆ  ಶಾಂತಾ ಛೇತ್ರಿ ಅವರು ಕೇಳಿದ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಗೃಹ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಹೇಳಿದ್ದಾರೆ.

ಆದರೆ  ಸರಕಾರದ ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆಯು ನಗರ ಪ್ರದೇಶದ ಚಟುವಟಿಕೆಗಳ ಸಹಿತ  ಎಡಪಂಥೀಯ ಉಗ್ರವಾದದ ಎಲ್ಲಾ ಅವತಾರಗಳನ್ನು  ಹತ್ತಿಕ್ಕುತ್ತಿದೆ ಎಂದು ಸಚಿವರು ಹೇಳಿದ್ದಾರೆ.

ನಗರದ ನಕ್ಸಲರು ಮತ್ತವರ ಸಹಾಯಕರ ವಿರುದ್ಧ  ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುವುದೆಂದು ಸಚಿವಾಲಯ ಹೇಳಿದೆಯೇ ?, ನಗರದ ನಕ್ಸಲರು ಎಂದರೆ ಯಾರು ಎಂದು ಸಚಿವಾಲಯ ವ್ಯಾಖ್ಯಾನಿಸಿದೆಯೇ  ಹಾಗೂ ನಗರದ ನಕ್ಸಲರು  ವಿಭಾಗದಲ್ಲಿ ಯಾರು ಬರುತ್ತಾರೆ ಈ ಕುರಿತು ಮಾಹಿತಿ ನೀಡಿ ಎಂದು ಟಿಎಂಸಿ ಸಂಸದೆ ಪ್ರಶ್ನಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ 'ನಗರದ ನಕ್ಸಲರು' ಎಂಬ ಪದ ಬಳಕೆ ಮಾಡಿದ್ದಾರಾದರೂ ಗೃಹ ಸಚಿವಾಲಯ ಮಾತ್ರ ತಾನು ಈ ಪದ ಬಳಕೆ ಮಾಡುತ್ತಿಲ್ಲ ಎಂದು ಹೇಳಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಹಲವಾರು ಸಂದರ್ಭಗಳಲ್ಲಿ ನಗರದ ನಕ್ಸಲರು ಪದ ಬಳಕೆ ಮಾಡಿದ್ದರೆ ಕಾನೂನು ಸಚಿವ  ರವಿಶಂಕರ್ ಪ್ರಸಾದ್ ಸಿಎಎ ವಿರುದ್ಧದ ಪ್ರತಿಭಟನೆಗಳ ಕುರಿತಂತೆ ಮಾತನಾಡುತ್ತಾ, ನಾವು ವಿದ್ಯಾರ್ಥಿಗಳು ಮತ್ತು ಪ್ರತಿಭಟನಾಕಾರರ ಜತೆ ಮಾತನಾಡಲು ಸಿದ್ಧರಿದ್ದೇವೆ. ಆದರೆ  ದ್ವೇಷದ ರಾಜಕಾರಣ ನಡೆಸುವ ಟುಕ್ಡೇ ಟುಕ್ಡೇ ಗ್ಯಾಂಗ್ ಮತ್ತು ನಗರದ ನಕ್ಸಲರ ಜತೆ ನಾವು ಮಾತನಾಡುವುದಿಲ್ಲ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News