ದಿಲ್ಲಿ ಗಲಭೆಯಲ್ಲಿ ಶಾಮೀಲಾಗಿದ್ದ 1,922 ಜನರ ಗುರುತು ಪತ್ತೆ: ಅಮಿತ್ ಶಾ

Update: 2020-03-12 16:37 GMT

ಹೊಸದಿಲ್ಲಿ, ಮಾ.12: ದಿಲ್ಲಿಯಲ್ಲಿ ನಡೆದ ಕೋಮು ಹಿಂಸಾಚಾರ ಕುರಿತ ಚರ್ಚೆಗೆ ಎನ್‌ಡಿಎ ಸರಕಾರ ಹಿಂಜರಿಯುವುದಿಲ್ಲ. ಕೋಮು ಸೌಹಾರ್ದ ಕಾಪಾಡುವ ಅಗತ್ಯದ ಹಿನ್ನೆಲೆಯಲ್ಲಿ ಹೋಳಿ ಹಬ್ಬದ ಬಳಿಕ ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚೆಗೆ ದಿನ ನಿಗದಿಮಾಡಲಾಗಿದೆ ಎಂದು ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.

 ದಿಲ್ಲಿ ಹಿಂಸಾಚಾರದ ವಿಷಯದಲ್ಲಿ ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಶಾ, ವಿಪಕ್ಷಗಳು ಹಲವು ಆರೋಪ ಮಾಡಿವೆ. ದಿಲ್ಲಿ ಪೊಲೀಸರು ಎಲ್ಲರ ದೂರುಗಳನ್ನೂ ಸ್ವೀಕರಿಸುವುದಿಲ್ಲ ಎಂಬ ಆರೋಪವನ್ನೂ ಮಾಡಲಾಗಿದೆ . ಆದರೆ ಒಂದೇ ಘಟನೆಗೆ ಹಲವು ಎಫ್‌ಐಆರ್‌ಗಳನ್ನು ದಾಖಲಿಸಲು ಆಗುವುದಿಲ್ಲ ಎಂದವರು ಸ್ಪಷ್ಟಪಡಿಸಿದರು.

ಇದುವರೆಗೆ 700ಕ್ಕೂ ಅಧಿಕ ಎಫ್‌ಐಆರ್ ದಾಖಲಿಸಲಾಗಿದೆ. 1922 ವ್ಯಕ್ತಿಗಳ ಮುಖ ಪರಿಚಯ ನಡೆಸಲಾಗಿದೆ. ಈ ವ್ಯಕ್ತಿಗಳು ದಾಂಧಲೆ ನಡೆಸಿರುವುದು, ಕಲ್ಲೆಸೆತದಲ್ಲಿ ತೊಡಗಿರುವುದು, ಆಸ್ತಿಗಳಿಗೆ ಹಾನಿ ಎಸಗಿರುವುದು ವೀಡಿಯೊ ದೃಶ್ಯದಲ್ಲಿ ಸ್ಪಷ್ಟವಾಗಿದೆ. ಗುರುತಿಸಲಾದ ಕಿಡಿಗೇಡಿಗಳನ್ನು ಬಂಧಿಸಲು ದಿಲ್ಲಿ ಪೊಲೀಸರ 40 ತಂಡವನ್ನು ನಿಯೋಜಿಸಲಾಗಿದೆ ಎಂದು ಶಾ ಹೇಳಿದ್ದಾರೆ. ದಿಲ್ಲಿಯಲ್ಲಿ ನಡೆದ ಹಿಂಸಾಚಾರದಲ್ಲಿ 52 ಜನರ ಹತ್ಯೆಯಾಗಿದ್ದು 526 ಮಂದಿ ಗಾಯಗೊಂಡಿದ್ದಾರೆ. 371 ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದ್ದು 142 ಮನೆಗಳಿಗೆ ಹಾನಿ ಎಸಗಲಾಗಿದೆ ಎಂದು ಬುಧವಾರ ಲೋಕಸಭೆಯಲ್ಲಿ ಶಾ ಹೇಳಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News