ಮನೆಯಿಂದಲೇ ಕೆಲಸ ಮಾಡಲು ಉದ್ಯೋಗಿಗಳಿಗೆ ಟ್ವಿಟರ್ ಸೂಚನೆ

Update: 2020-03-12 17:00 GMT

ಸಾನ್‌ಫ್ರಾನ್ಸಿಸ್ಕೊ (ಅಮೆರಿಕ), ಮಾ. 12: ನೂತನ ಕೊರೋನವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಅಭೂತಪೂರ್ವ ಕ್ರಮವನ್ನು ತೆಗೆದುಕೊಂಡಿರುವ ಸಾಮಾಜಿಕ ಮಾಧ್ಯಮ ಟ್ವಿಟರ್, ಮನೆಯಿಂದಲೇ ಕೆಲಸ ಮಾಡುವಂತೆ ಜಗತ್ತಿನಾದ್ಯಂತ ಇರುವ ತನ್ನೆಲ್ಲ ಸಿಬ್ಬಂದಿಗೆ ಸೂಚಿಸಿದೆ.

ಜಗತ್ತಿನಾದ್ಯಂತ ಹಬ್ಬುತ್ತಿರುವ ಕೊರೋನವೈರಸ್‌ನಿಂದಾಗಿ ಈವರೆಗೆ 4,600ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಹಾಗೂ 1,26,000ಕ್ಕೂ ಅಧಿಕ ಮಂದಿ ಸೋಂಕಿಗೆ ಗುರಿಯಾಗಿದ್ದಾರೆ.

ದಕ್ಷಿಣ ಕೊರಿಯ, ಹಾಂಕಾಂಗ್ ಮತ್ತು ಜಪಾನ್‌ನಲ್ಲಿರುವ ತನ್ನ ಸಿಬ್ಬಂದಿ ಕಡ್ಡಾಯವಾಗಿ ಮನೆಯಿಂದಲೇ ಕೆಲಸ ಮಾಡಬೇಕೆಂದು ಟ್ವಿಟರ್ ಈ ತಿಂಗಳ ಆದಿ ಭಾಗದಲ್ಲೇ ಆದೇಶಿಸಿತ್ತು ಹಾಗೂ ಫೆಬ್ರವರಿಯಲ್ಲಿ ಮಹತ್ವದ್ದಲ್ಲದ ವಾಣಿಜ್ಯ ಪ್ರವಾಸಗಳು ಮತ್ತು ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿತ್ತು.

 ‘‘ನಾವೀಗ ನಮ್ಮ ಮೊದಲಿನ ಸೂಚನೆಗಳಿಂದ ಇನ್ನೂ ಮುಂದಕ್ಕೆ ಹೋಗಿದ್ದೇವೆ. ಜಗತ್ತಿನಲ್ಲಿರುವ ನಮ್ಮ ಎಲ್ಲಾ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಬೇಕೆಂದು ಸೂಚಿಸಿದ್ದೇವೆ’’ ಎಂದು ಟ್ವಿಟರ್ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಜೆನಿಫರ್ ಕ್ರಿಸ್ಟೀ ಬುಧವಾರ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News