ಗೃಹಬಂಧನ ಹಿಂಪಡೆದ ಜಮ್ಮು ಕಾಶ್ಮೀರ ಆಡಳಿತ: ಸದ್ಯದಲ್ಲೇ ಫಾರೂಕ್ ಅಬ್ದುಲ್ಲಾ ಬಿಡುಗಡೆ

Update: 2020-03-13 19:15 GMT

ಹೊಸದಿಲ್ಲಿ, ಮಾ.13: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾರ ಗೃಹಬಂಧನ ಆದೇಶವನ್ನು ಹಿಂಪಡೆದಿರುವುದಾಗಿ ಕೇಂದ್ರ ಸರಕಾರ ಶುಕ್ರವಾ ರ ತಿಳಿಸಿದೆ.

    ಸಾರ್ವಜನಿಕ ಸುರಕ್ಷಾ ಕಾಯ್ದೆಯಡಿ ಕಳೆದ ಸುಮಾರು 7 ತಿಂಗಳಿಂದ ಗೃಹಬಂಧನದಲ್ಲಿದ್ದ ಫಾರೂಕ್ ಅಬ್ದುಲ್ಲಾರನ್ನು ತಕ್ಷಣದಿಂದ ಬಿಡುಗಡೆಗೊಳಿಸುವಂತೆ ಕೇಂದ್ರ ಸರಕಾರ ಆದೇಶಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಯೋಜನಾ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಹೇಳಿದ್ದಾರೆ.

 “ನನ್ನ ತಂದೆ ಮತ್ತೊಮ್ಮೆ ಸ್ವತಂತ್ರ್ಯ ವ್ಯಕ್ತಿಯಾಗಿದ್ದಾರೆ” ಎಂದು ಫಾರೂಕ್ ಅಬ್ದುಲ್ಲಾರ ಪುತ್ರಿ ಸಫಿಯಾ ಅಬ್ದುಲ್ಲಾ ಖಾನ್ ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿದ 2019ರ ಆಗಸ್ಟ್ 5ರಿಂದ 83 ವರ್ಷದ ಫಾರೂಕ್ ಅಬ್ದುಲ್ಲಾ, ಪುತ್ರ , ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಪಿಡಿಪಿ ನಾಯಕಿ, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರನ್ನು ಸಾರ್ವಜನಿಕ ಸುರಕ್ಷಾ ಕಾಯ್ದೆ (ಪಿಎಸ್‌ಎ) ಯಡಿ ಬಂಧನದಲ್ಲಿಡಲಾಗಿದೆ.

ಈ ಕಾಯ್ದೆಯಡಿ ಯಾವುದೇ ವ್ಯಕ್ತಿಯನ್ನು ವಿಚಾರಣೆ ನಡೆಸದೆ 2 ವರ್ಷದ ವರೆಗೆ ಬಂಧಿಸಬಹುದಾಗಿದೆ. ಭಯೋತ್ಪಾದಕರು, ಪ್ರತ್ಯೇಕತಾವಾದಿಗಳು ಅಥವಾ ಕಲ್ಲೆಸೆತ ನಡೆಸುವ ಕಿಡಿಗೇಡಿಗಳ ವಿರುದ್ಧ ಪಿಎಸ್‌ಎ ಬಳಸಲಾಗುತ್ತದೆ. ಆದರೆ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ, ಹಾಲಿ ಸಂಸದರ ವಿರುದ್ಧ ಇದೇ ಮೊತ್ತಮೊದಲ ಬಾರಿಗೆ ಈ ಕಾಯ್ದೆಯನ್ನು ಬಳಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News