"ಜಸ್ಟಿಸ್ ಮುರಳೀಧರ್ 'ಅವಸರದ ವರ್ಗಾವಣೆ' ಕುರಿತಂತೆ ಕ್ರಮ ಕೈಗೊಳ್ಳಿ"

Update: 2020-03-13 10:01 GMT

ಹೊಸದಿಲ್ಲಿ: ದಿಲ್ಲಿ ಹೈಕೋರ್ಟಿನ ನ್ಯಾಯಾಧೀಶ ಜಸ್ಟಿಸ್ ಎಸ್. ಮುರಳೀಧರ್ ಅವರನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿಗೆ  ವರ್ಗಾವಣೆಗೊಳಿಸಿದ ಸರಕಾರದ 'ಅವಸರದ ನಿರ್ಧಾರ' ಕುರಿತಂತೆ ಕಳವಳ ವ್ಯಕ್ತಪಡಿಸಿ 'ದಿ ಇಂಟರ್‍ನ್ಯಾಷನಲ್ ಬಾರ್ ಅಸೋಸಿಯೇಶನ್ಸ್ ಹ್ಯೂಮನ್ ರೈಟ್ಸ್ ಇನ್‍ಸ್ಟಿಟ್ಯೂಟ್' ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದೆ.

ರಾಷ್ಟ್ರಪತಿ ಈ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು  ಸಂಘಟನೆಯ ಪದಾಧಿಕಾರಿಗಳ ಸಹಿಯಿರುವ ಬಹಿರಂಗ ಪತ್ರದಲ್ಲಿ ಕೋರಲಾಗಿದೆ.

"ಸಾಮಾಜಿಕ ಅಶಾಂತಿಯಿದ್ದಂತಹ ಸಂದರ್ಭದಲ್ಲಿ ಈ ಅವಸರದ ವರ್ಗಾವಣೆ ಭಾರತದಲ್ಲಿ ನ್ಯಾಯಾಂಗದ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯತ್ನದ ಭಯವನ್ನು ಮೂಡಿಸಿದೆ. ದೇಶದ ಕಾನೂನಿನನ್ವಯ ಸರಕಾರವೊಂದನ್ನು ಬಾಧ್ಯಸ್ಥಗೊಳಿಸುವ ಹಕ್ಕು ನ್ಯಾಯಾಂಗಕ್ಕಿದೆ, ತನ್ನ ಸ್ವತಂತ್ರ ನಿರ್ಧಾರವನ್ನು ಕೈಗೊಳ್ಳುವ ನ್ಯಾಯಾಧೀಶರನ್ನು  ತರಾಟೆಗೆ ತೆಗೆದುಕೊಳ್ಳಬಾರದು'' ಎಂದು ಸಂಘಟನೆ ತನ್ನ ಪತ್ರದಲ್ಲಿ ಹೇಳಿಕೊಂಡಿದೆ.

ದಿ ಇಂಟರ್‍ನ್ಯಾಷನಲ್ ಬಾರ್ ಅಸೋಸಿಯೇಶನ್ಸ್ ಹ್ಯೂಮನ್ ರೈಟ್ಸ್ ಇನ್‍ಸ್ಟಿಟ್ಯೂಟ್  ಜಗತ್ತಿನಾದ್ಯಂತ ಮಾನವ ಹಕ್ಕುಗಳ ರಕ್ಷಣೆಗೆ ಹಾಗೂ ನ್ಯಾಯಾಂಗದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ವಕೀಲರ ಸಂಘಟನೆಯಾಗಿದೆ.

ದ್ವೇಷದ ಭಾಷಣ ಮಾಡಿದ ಮೂವರು ಬಿಜೆಪಿ ನಾಯಕರ ವಿರುದ್ಧ ಎಫ್‍ಐಆರ್ ದಾಖಲಿಸಲು ವಿಫಲರಾದ ಪೊಲೀಸರನ್ನು ಜಸ್ಟಿಸ್ ಮುರಳೀಧರ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಸರಕಾರ ಮಧ್ಯರಾತ್ರಿ ಅವರ ವರ್ಗಾವಣೆ ಆದೇಶ ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News