ಗುಜರಾತ್: ಗುಲ್ಬರ್ಗ ಹತ್ಯಾಕಾಂಡದ ಆರೋಪಿಗಳ ಪರ ವಾದಿಸಿದ ವಕೀಲಗೆ ಬಿಜೆಪಿ ರಾಜ್ಯಸಭೆ ಟಿಕೆಟ್

Update: 2020-03-13 10:36 GMT

ಹೊಸದಿಲ್ಲಿ: ಗುಜರಾತ್‍ ನಿಂದ ರಾಜ್ಯಸಭೆಗೆ ಕಳುಹಿಸಲು ಬಿಜೆಪಿ ಆಯ್ಕೆ ಮಾಡಿದ ಮೂವರು ಅಭ್ಯರ್ಥಿಗಳ ಹೆಸರುಗಳು ಹಲವರ ಹುಬ್ಬೇರುವಂತೆ ಮಾಡಿದೆ. ಮುಖ್ಯವಾಗಿ ವಕೀಲ ಅಭಯ್ ಭಾರದ್ವಾಜ್ ಅವರನ್ನು ಆಯ್ಕೆ ಮಾಡಿರುವುದು ವಿವಾದ ಸೃಷ್ಟಿಸಿದೆ.

2002ರ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ ಆರೋಪಿಗಳ ಪರ ವಕೀಲರಾಗಿದ್ದವರು ಅಭಯ್ ಭಾರದ್ವಾಜ್ ಆಗಿದ್ದರೆ, ಇನ್ನೊಬ್ಬರು ಸುಮೇರ್ ಸಿಂಗ್ ಸೋಳಂಕಿ ಮಧ್ಯ ಪ್ರದೇಶದ ಭಾರ್ವಾನಿ ಜಿಲ್ಲೆಯವರಾಗಿದ್ದು, ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದಾರೆ. ಮೂರನೆಯವರಾದ ಇಂದು ಗೋಸ್ವಾಮಿ ಪ್ರಧಾನಿ ಮೋದಿಯ ಸ್ನೇಹಿತೆ ಎಂದು ಹೇಳಲಾಗಿದ್ದು, ಮೋದಿ ಗುಜರಾತ್‍ ನಲ್ಲಿ ಪ್ರಭಾರಿ ಆಗಿದ್ದ ವೇಳೆ ಆಕೆಯ ಪರಿಚಯ ಅವರಿಗಿತ್ತು ಎನ್ನಲಾಗಿದೆ. ಆಕೆಯ ಹೆಸರನ್ನು ಪ್ರಧಾನಿ ಕಾರ್ಯಾಲಯದಿಂದಲೇ ಶಿಫಾರಸು ಮಾಡಲಾಗಿತ್ತೆಂದು ಮೂಲಗಳು ತಿಳಿಸಿವೆ.

ಯಾರಿವರು ಅಭಯ್ ಭಾರದ್ವಾಜ್ ?

ಮೂವರ ಪೈಕಿ ಅಭಯ್ ಭಾರದ್ವಾಜ್ ಹೆಸರು ಸಾಕಷ್ಟು ಕುತೂಹಲ ಮೂಡಿಸುತ್ತದೆ. ರಾಜಕೋಟ್ ಮೂಲದ ವಕೀಲರಾಗಿರುವ ಇವರು 2002ರಲ್ಲಿ ಗುಜರಾತ್ ಹತ್ಯಾಕಾಂಡದ ವೇಳೆ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಸಹಿತ 70 ಜನರು ಬಲಿಯಾದ ಪ್ರಕರಣದಲ್ಲಿ ಆರೋಪಿಗಳ ಪರ ವಾದಿಸಿದ್ದವರು. ವಿಚಾರಣೆಯ ನಂತರ ವಿಶೇಷ ನ್ಯಾಯಾಲಯ 2016ರಲ್ಲಿ 24 ಆರೋಪಿಗಳೆಂದು ದೋಷಿಗಳೆಂದು ಹೆಸರಿಸಿದ್ದರೆ, 36 ಮಂದಿಯನ್ನು ಖುಲಾಸೆಗೊಳಿಸಿತ್ತು.

ಭಾರದ್ವಾಜ್ ಅವರನ್ನು ರಾಜ್ಯಸಭೆಗೆ ನಾಮಕರಣಗೊಳಿಸುವ ಮೂಲಕ ಪಕ್ಷ ಹಲವು ಹಿರಿಯ ನಾಯಕರನ್ನು ಕಡೆಗಣಿಸಿದೆ ಎನ್ನಲಾಗಿದೆ. ಭಾರದ್ವಾಜ್ ಅವರಿಗೆ ಎಬಿವಿಪಿ ಜತೆ ತಮ್ಮ ವಿದ್ಯಾರ್ಥಿ ಜೀವನದಲ್ಲಿ ನಂಟಿದ್ದರೂ  1990ರ ಚುನಾವಣೆಯಲ್ಲಿ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ದೊರೆಯದೆ ನಿರಾಶರಾಗಿದ್ದರು. 1995ರಲ್ಲಿ  ಅವರು ರಾಜ್‍ ಕೋಟ್‍ ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದಿದ್ದರು. ಆಗ ಆ ಕ್ಷೇತ್ರದಿಂದ ಈಗಿನ ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲ ಸ್ಪರ್ಧಿಸಿದ್ದರು.

ಐಎಎಸ್ ಅಧಿಕಾರಿ ಪ್ರದೀಪ್ ಶರ್ಮ ಅವರ ವಿರುದ್ಧ ದಾಖಲಾಗಿದ್ದ ಅಧಿಕಾರ ದುರ್ಬಳಕೆ ಪ್ರಕರಣದಲ್ಲಿ ಅವರು ಗುಜರಾತ್ ಸರಕಾರದ ಸಹಾಯಕ ವಿಶೇಷ ಅಭಿಯೋಜಕರಾಗಿದ್ದರು.

ಭಾರದ್ವಾಜ್ ಮತ್ತು ಗುಜರಾತ್ ಸೀಎಂ ವಿಜಯ್ ರೂಪಾನಿ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಎಬಿವಿಪಿಯಲ್ಲಿದ್ದಾಗಲೇ ಸ್ನೇಹಿತರಾಗಿದ್ದರು. ಅವರ ಕಿರಿಯ ಸೋದರ ನಿತಿನ್ ಭಾರಧ್ವಾಜ್ ಸೌರಾಷ್ಟ್ರದಲ್ಲಿ ಮುಖ್ಯಮಂತ್ರಿಯ ಸಮೀಪವರ್ತಿಯಾಗಿದ್ದಾರೆ.

ಗುಜರಾತ್‍ ನ ಒಟ್ಟು 11 ರಾಜ್ಯಸಭಾ ಸ್ಥಾನಗಳ ಪೈಕಿ  ನಾಲ್ಕು ಸ್ಥಾನಗಳಿಗೆ ಮಾರ್ಚ್ 26ರಂದು ಚುನಾವಣೆಗಳು ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News