ಜಿಎಸ್ ಟಿ ಹೆಚ್ಚಳ: ಮೊಬೈಲ್ ಫೋನ್ ಗಳು ಇನ್ನು ದುಬಾರಿ

Update: 2020-03-14 16:31 GMT

ಹೊಸದಿಲ್ಲಿ,ಮಾ.14: ಮೊಬೈಲ್ ಫೋನ್‌ ಗಳ ಮೇಲಿನ ಜಿಎಸ್‌ಟಿಯನ್ನು ಈಗಿನ ಶೇ.12ರಿಂದ ಶೇ.18ಕ್ಕೆ ಹೆಚ್ಚಿಸಲು ಶನಿವಾರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಕುಗಳು ಮತ್ತು ಸೇವಾ ತೆರಿಗೆಗಳ ಮಂಡಳಿಯ 39ನೇ ಸಭೆಯು ನಿರ್ಧರಿಸಿದೆ.

ಸದ್ಯ ಮೊಬೈಲ್ ಫೋನ್‌ ಗಳಿಗೆ ಶೇ.12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದ್ದು, ಅವುಗಳ ಕೆಲವು ಬಿಡಿಭಾಗಗಳಿಗಾಗಿ ತಯಾರಕರು ಶೇ.18ರಷ್ಟು ಜಿಎಸ್‌ಟಿಯನ್ನು ತೆರಬೇಕಿದೆ.

 ಜಿಎಸ್‌ಟಿ ಮಂಡಳಿಯು ಮೊಬೈಲ್ ಫೋನ್‌ ಗಳು, ಪಾದರಕ್ಷೆಗಳು ಮತ್ತು ಜವಳಿ ಸೇರಿದಂತೆ ಐದು ಕ್ಷೇತ್ರಗಳಿಗೆ ಏಕರೂಪದ ತೆರಿಗೆಯನ್ನು ನಿಗದಿಗೊಳಿಸಬಹುದು ಎಂದು ಈ ಮೊದಲು ವರದಿಯಾಗಿತ್ತು.

ಅಂತಿಮವಾಗಿ ಸಿದ್ಧಗೊಂಡ ಉತ್ಪನ್ನದ ಮೇಲಿನ ತೆರಿಗೆಯು ಕಚ್ಚಾವಸ್ತುಗಳ ಮೇಲಿನ ತೆರಿಗೆಗಿಂತ ಕಡಿಮೆಯಿದ್ದಾಗ ಸರಕಾರವು ಹೆಚ್ಚುವರಿ ತೆರಿಗೆಯನ್ನು ಮರುಪಾವತಿಸಬೇಕಾಗುತ್ತದೆ. ಮೊಬೈಲ್ ಫೋನ್‌ಗಳ ಮೇಲಿನ ಜಿಎಸ್‌ಟಿಯು ಈ ವರ್ಗಕ್ಕೆ ಸೇರುತ್ತಿತ್ತು. ಇದು ಮೊಬೈಲ್ ಫೋನ್ ತಯಾರಕರಿಗೂ ಸಮಸ್ಯೆಯಾಗಿತ್ತು. ಹೀಗಾಗಿ ಇದಕ್ಕೆ ಅಂತ್ಯ ಹಾಡಲು ಜಿಎಸ್‌ಟಿಯನ್ನು ಶೇ.6ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಮೊಬೈಲ್ ಫೋನ್‌ ಗಳ ಬೆಲೆ ಹೆಚ್ಚಿಸುವುದು ತಯಾರಕರಿಗೆ ಬಿಟ್ಟ ವಿಷಯವಾಗಿದೆ ಎಂದು ವಿತ್ತ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News