ದುಬೈನಿಂದ ಪುಣೆಗೆ ಆಗಮಿಸಿರುವರು ‘ಅಪಾಯಕಾರಿ’ ದೇಶಗಳಿಗೆ ಭೇಟಿ ನೀಡಿರಲಿಲ್ಲ: ಅಧಿಕಾರಿಗಳು

Update: 2020-03-14 15:16 GMT

 ಪುಣೆ,ಮಾ.14: ಸ್ಪೈಸ್ ಜೆಟ್ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಎರಡು ವಿಮಾನಗಳಲ್ಲಿ ಶನಿವಾರ ಬೆಳಗಿನ ಜಾವ ದುಬೈನಿಂದ ಇಲ್ಲಿಗೆ ಬಂದಿಳಿದಿರುವ ಒಟ್ಟು 112 ಪ್ರಯಾಣಿಕರ ಪೈಕಿ ಯಾರೂ ಕಳೆದ ಕೆಲವು ವಾರಗಳಲ್ಲಿ ಏಳು ಅತ್ಯಂತ ಅಪಾಯಕಾರಿ ಕೊರೋನವೈರಸ್ ಪೀಡಿತ ದೇಶಗಳಿಗೆ ಭೇಟಿ ನೀಡಿರಲಿಲ್ಲ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಚೀನಾ, ಇಟಲಿ, ಇರಾನ್, ದಕ್ಷಿಣ ಕೊರಿಯಾ, ಫ್ರಾನ್ಸ್, ಸ್ಪೇನ್ ಮತ್ತು ಜರ್ಮನಿ ಇವು ಅತ್ಯಂತ ಹೆಚ್ಚಿನ ಕೊರೋನವೈರಸ್ ಪ್ರಕರಣಗಳು ವರದಿಯಾಗಿರುವ ‘ಅತ್ಯಂತ ಅಪಾಯಕಾರಿ’ದೇಶಗಳಾಗಿವೆ.

ದುಬೈ-ಪುಣೆ ವಿಮಾನಗಳಲ್ಲಿ ಆಗಮಿಸುವವರು ಫೆ.15ರ ಬಳಿಕ ಯಾವುದೇ ಅತ್ಯಂತ ಅಪಾಯಕಾರಿ ದೇಶಕ್ಕೆ ಭೇಟಿ ನೀಡಿದ್ದಿದ್ದರೆ ಅವರಲ್ಲಿ ವೈರಸ್‌ನ ಲಕ್ಷಣಗಳಿದ್ದರೂ ಇಲ್ಲದಿದ್ದರೂ ಅವರನ್ನು ಪ್ರತ್ಯೇಕ ನಿಗಾದಡಿ ಇರಿಸಲಾಗುವುದು ಎಂದು ಪುಣೆ ಜಿಲ್ಲಾಡಳಿತವು ಗುರುವಾರ ಪ್ರಕಟಿಸಿತ್ತು.

ಎಲ್ಲ ಪ್ರಯಾಣಿಕರ ತಪಾಸಣೆ ನಡೆಸಲಾಗಿದ್ದು ಯಾರಲ್ಲಿಯೂ ಕೊರೋನವೈರಸ್ ಲಕ್ಷಣಗಳು ಪತ್ತೆಯಾಗಿಲ್ಲ.ಆದರೆ ಓರ್ವ ಪ್ರಯಾಣಿಕ ತಾನು ಕೆಮ್ಮು ಮತ್ತು ಶೀತದಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡಿದ್ದು,ಆತನನ್ನು ಸರಕಾರಿ ನಾಯ್ಡು ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ಗೆ ಸೇರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು. ಪುಣೆಯಲ್ಲಿ ಹಾಲಿ 10 ಕೊರೋನವೈರಸ್ ರೋಗಿಗಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News