ತೆಲಂಗಾಣ: ಇನ್ನೊಂದು ಕೊರೋನ ಸೋಂಕಿನ ಪ್ರಕರಣ ಪತ್ತೆ

Update: 2020-03-14 15:52 GMT

ಹೈದರಾಬಾದ್, ಮಾ. 14: ತೆಲಂಗಾಣದಲ್ಲಿ ಕೊರೋನ ಸೋಂಕಿನ ಎರಡನೇ ಪ್ರಕರಣ ಪತ್ತೆಯಾಗಿದೆ. ಹೈದರಾಬಾದ್‌ನಲ್ಲಿ ಆರಂಭಿಕ ಪರೀಕ್ಷೆಯಲ್ಲಿ ಇದು ದೃಢಪಟ್ಟಿದೆ. ಇದರಿಂದಾಗಿ ತೆಲಂಗಾಣ ಸರಕಾರ ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಕೊರೋನ ಸೋಂಕಿಗೆ ಒಳಗಾದ ರಾಜ್ಯದ ಮೊದಲ ವ್ಯಕ್ತಿ ಗಾಂಧಿ ಆಸ್ಪತ್ರೆಯಿಂದ ಶುಕ್ರವಾರ ರಾತ್ರಿ ಬಿಡುಗಡೆಯಾಗಿದ್ದಾರೆ ಎಂದು ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಿಧಾನ ಸಭೆಯಲ್ಲಿ ಶನಿವಾರ ಘೋಷಿಸಿದ್ದಾರೆ. ಕೊರೋನ ಸೋಂಕಿಗೆ ಒಳಗಾಗಿದ್ದ ಈ 24 ವರ್ಷದ ಸಾಫ್ಟ್ ವೇರ್ ಎಂಜಿನಿಯರ್ ಕಳೆದ 17 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು.

‘‘ಆದಾಗ್ಯೂ, ಇಟಲಿಯಿಂದ ಹಿಂದಿರುಗಿದ ವ್ಯಕ್ತಿಯೋರ್ವರಿಗೆ ಕೊರೋನ ಸೋಂಕಿನ ಲಕ್ಷಣ ಇರುವುದಾಗಿ ಆಸ್ಪತ್ರೆ ಶನಿವಾರ ಬೆಳಗ್ಗೆ ವರದಿ ಮಾಡಿತ್ತು. ಪರೀಕ್ಷೆಯ ಬಳಿಕ ಅದು ದೃಢಪಟ್ಟಿತ್ತು. ಅನಂತರ ಅವರನ್ನು ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿದೆ’’ ಎಂದು ಚಂದ್ರಶೇಖರ್ ರಾವ್ ಅವರು ಹೇಳಿದರು. ಆರಂಭಿಕ ಪರೀಕ್ಷೆಯಲ್ಲಿ ಈ ವ್ಯಕ್ತಿಯಲ್ಲಿ ಕೊರೋನ ಸೋಂಕಿನ ಲಕ್ಷಣ ಕಂಡು ಬಂದಿತ್ತು. ಅನಂತರ ಪುಣೆಯ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಅದು ದೃಢಪಟ್ಟಿತ್ತು. ಕೊರೋನ ಲಕ್ಷಣ ಇರುವ ಇನ್ನಿಬ್ಬರು ವ್ಯಕ್ತಿಗಳನ್ನು ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ದಾಖಲಿಸಲಾಗಿದೆ. ಅವರ ದೇಹದ್ರವದ ಮಾದರಿಗಳನ್ನು ತಪಾಸಣೆಗಾಗಿ ಪುಣೆಗೆ ಕಳುಹಿಸಿ ಕೊಡಲಾಗಿದೆ ಎಂದು ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News