ಕೆಳದರ್ಜೆಗೆ ಬಲಿಯಾದ ಚಿತ್ರ ಶಿವಾರ್ಜುನ

Update: 2020-03-15 11:23 GMT

ಶಿವಾರ್ಜುನ ಎನ್ನುವ ಹೆಸರಿನಲ್ಲಿಯೇ ಅರ್ಜುನನ ಹೆಸರು ಇದೆ. ಬಹುಶಃ ಅದು ಅರ್ಜುನ್ ಸರ್ಜಾ ಅವರನ್ನು ಪ್ರತಿನಿಧಿಸುತ್ತಿರಬೇಕು ಎಂದುಕೊಂಡರೆ ತಪ್ಪೇನಿಲ್ಲ. ಯಾಕೆಂದರೆ ರಿಮೇಕ್ ಅಲ್ಲ ಎಂದು ಹೇಳಲಾಗಿದ್ದರೂ, ಒಂದೂವರೆ ದಶಕದ ಹಿಂದೆ ತೆರೆಕಂಡ ಅರ್ಜುನ್ ಸರ್ಜಾ ಅವರ ತಮಿಳು ಚಿತ್ರ ‘ಗಿರಿ’ಯನ್ನೇ ಮುಕ್ಕಾಲು ಪಾಲು ಬಳಸಿಕೊಂಡಿರುವ ಚಿತ್ರ ಇದು.

ಎರಡು ಹಳ್ಳಿಗಳ ನಡುವಿನ ಹೊಡೆದಾಟದಲ್ಲಿ ಜಾತ್ರೆ ಬಡವಾಗುವ ಕತೆ! ಇಂತಹ ಊರುಗಳನ್ನು ಒಂದು ಮಾಡುವ ನಾಯಕರು ಸಾಕಷ್ಟು ಬಂದು ಹೋಗಿದ್ದಾರೆ. ಆದರೂ ಇಲ್ಲಿನ ನಾಯಕನಿಗೂ ಅದೇ ಕಾಯಕ. ಹೆಸರು ಶಿವ. ಆದರೆ ಹೊಡೆದಾಟ, ಕುಣಿತ ಬಿಟ್ಟು ಬೇರೇನೂ ಹೊಸದಾಗಿ ಮಾಡಿದ್ದು ಕಾಣಿಸುವುದಿಲ್ಲ. ಡಾಕ್ಟರ್ ಒಬ್ಬಳು ಆತನ ಮೈಮಾಟ ನೋಡಿ ಹಿಂದೆ ಬೀಳುತ್ತಾಳೆ. ಆದರೆ ಆತ ಆಕೆಯ ಹಿಂದೆ ಬೀಳುವುದಿಲ್ಲ. ಚಿತ್ರ ದ್ವಿತೀಯಾರ್ಧ ತಲುಪುವಷ್ಟರಲ್ಲಿ ಫ್ಲ್ಯಾಶ್ ಬ್ಯಾಕ್ ಆರಂಭಗೊಳ್ಳುತ್ತದೆ. ಪುಟ್ಟದೊಂದು ತಿರುವು ಕತೆಯನ್ನು ಕುತೂಹಲದತ್ತ ಕೊಂಡೊಯ್ಯುತ್ತದೆ. ಆದರೆ ಹಾಗಂತ ಕ್ಲೈಮ್ಯಾಕ್ಸ್ ಹೊಸದೇನನ್ನೂ ಹೇಳುವುದಿಲ್ಲ. ದ್ವಿತೀಯಾರ್ಧದಲ್ಲಿ ಮತ್ತೋರ್ವ ನಾಯಕಿಯೊಂದಿಗೆ ಇನ್ನೊಂದು ಡ್ಯುಯೆಟ್ ಹಾಡು ಬರುತ್ತದೆ ಎನ್ನುವುದನ್ನು ಬಿಟ್ಟರೆ ಅವರಿಬ್ಬರ ನಡುವಿನ ಸಂಬಂಧದಲ್ಲಿಯೂ ಕತೆಯೇನೂ ಇಲ್ಲ.

ಮೊದಲಾರ್ಧದಲ್ಲಿ ವೈದ್ಯೆ ನಾಯಕನ ಹಿಂದೆ ಬೀಳಲು ಆತನ ಮೈಕಟ್ಟು ಕಾರಣವಾಗಿರುತ್ತದೆ. ಆದರೆ ಇಲ್ಲಿ ನಾಯಕನಾಗಿರುವುದು ಅರ್ಜುನ್ ಸರ್ಜಾ ಅಲ್ಲ, ಅಂತಹ ಮೈಕಟ್ಟು ಇಲ್ಲದ ಚಿರಂಜೀವಿ ಸರ್ಜಾ ಎನ್ನುವುದು ಆಕೆಗೆ ಗೊತ್ತಾದಂತಿಲ್ಲ! ಅದೇ ಡಾಕ್ಟರ್ ಪೇಶೆಂಟ್‌ಗಳ ಕ್ಯೂ ಹೆಚ್ಚಿಸಿಕೊಳ್ಳಲು ತನ್ನ ಮೈಮಾಟ ಪ್ರದರ್ಶಿಸುತ್ತಾಳೆ ಎನ್ನುವುದು ಕೂಡ ತಮಾಷೆಯಂತೆ! ಒಂದು ಕಾಲದಲ್ಲಿ ಕನ್ನಡದ ನಾಯಕರು, ಆ್ಯಕ್ಷನ್ ಹೀರೋಗಳು ತಮ್ಮ ಸ್ಟಾರ್ ಪಟ್ಟ ಅವಸಾನಕ್ಕೆ ಬರುತ್ತಿದ್ದ ಹಾಗೆ ಇಂತಹ ಬಿ ಗ್ರೇಡ್ ದೃಶ್ಯಗಳನ್ನು ಹಾಕಿಸಿಕೊಳ್ಳುತ್ತಿದ್ದರು. ಇನ್ನೂ ಉದಯೋನ್ಮುಖ ನಟರ ಪಟ್ಟಿಯಲ್ಲಿರುವ ಚಿರಂಜೀವಿ ಸರ್ಜಾ ತಮ್ಮ ಚಿತ್ರದಲ್ಲಿ ಇಂತಹ ಸನ್ನಿವೇಶಗಳನ್ನು ಒಪ್ಪಿಕೊಂಡು ಎ ಸರ್ಟಿಫಿಕೇಟ್ ಪಡೆಯುವ ದರ್ದು ಯಾಕಿತ್ತು ಎನ್ನುವುದೇ ಅರ್ಥವಾಗುವುದಿಲ್ಲ! ಎರಡು ರೇಪ್ ಪ್ರಯತ್ನಗಳು, ಅದರಲ್ಲೊಂದು ಸಕ್ಸಸ್ಸು, ತಮಾಷೆಯ ಹೆಸರಲ್ಲಿ ಸಂಭಾಷಣೆಗಳೋ ಪರಮ ಹೊಲಸು.. ಆ್ಯಕ್ಷನ್ ಮತ್ತು ಹಾಡುಗಳಲ್ಲಿ ಗಮನ ಸೆಳೆಯುವುದು ಬಿಟ್ಟರೆ ನಾಯಕನಾಗಿ ಚಿರು ಸರ್ಜಾ ಗುರುತಿಸಿಕೊಳ್ಳುವುದೇ ಇಲ್ಲ. ಎರಡು ಊರುಗಳ ಮುಖಂಡರಾಗಿ ಅವಿನಾಶ್ ಮತ್ತು ಭೋಜ್ ಪುರಿ ನಟ ರವಿಕಿಶನ್ ಅಭಿನಯಿಸಿದ್ದಾರೆ. ಡಾಕ್ಟರ್ ಮೇಯಪ್ಪನಾಗಿ ಸಾಧು ಕೋಕಿಲ, ಸಹಾಯಕ ಗಳಗಂಟೆಯಾಗಿ ತರಂಗ ವಿಶ್ವ ಕಾಣಿಸಿಕೊಂಡಿದ್ದಾರೆ. ವೈದ್ಯೆ ಭಾರತಿಯಾಗಿ ಅಕ್ಷತಾ ಶ್ರೀನಿವಾಸ್ ಪಾತ್ರ ಮೈಮಾಟ ತೋರಿಸುವುದಕ್ಕೆ ಸೀಮಿತವಾಗಿದೆ. ಮಧ್ಯಂತರದ ಬಳಿಕ ತನ್ನ ಮತ್ತು ನಾಯಕನ ನಡುವೆ ಮಧ್ಯಂತರ ಇರಬಾರದೆಂದು ನಿರಂತರ ಹಿಂದೆ ಬೀಳುವ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ಅಭಿನಯಿಸಿದ್ದಾರೆ. ಬಜಾರಿ ಹುಡುಗಿಯಾಗಿ ಅವರ ನಟನೆ ಇತರರಿಗಿಂತ ಉತ್ತಮ. ಸರಕಾರಿ ಅಧಿಕಾರಿಯಾಗಿ ತಾರಾ ಮತ್ತು ತಹಶೀಲ್ದಾರರ ಪಾತ್ರದಲ್ಲಿ ಕಿಶೋರ್ ತಮ್ಮ ಪಾತ್ರದ ಘನತೆ ಉಳಿಸಿದ್ದಾರೆ. ಪ್ರಥಮ ಬಾರಿಗೆ ಕ್ಯಾಮರಾ ಮುಂದೆ ಬಂದು ಬಾಲಕಲಾವಿದನಾಗಿ ಗುರುತಿಸಿಕೊಂಡಿರುವ ತಾರಾ ಅವರ ಪುತ್ರ ಶ್ರೀಕೃಷ್ಣ ಭರವಸೆಯ ಅಭಿನಯ ನೀಡಿರುವುದು ವಿಶೇಷ. ಬಹುಶಃ ಕಲೆ ರಕ್ತದಲ್ಲೇ ಬರುತ್ತದೆ ಎನ್ನುವ ಮಾತು ಇಂತಹ ಪ್ರತಿಭೆಗಳನ್ನು ಕಂಡೇ ಹುಟ್ಟಿರಬೇಕು. ‘ಮಲ್ಲ’ ಚಿತ್ರದ ರವಿಚಂದ್ರನ್ ಗೆಟಪ್‌ನಲ್ಲಿ ಎಂಟ್ರಿಯಾಗುವ ಶಿವರಾಜ್ ಕೆ.ಆರ್.ಪೇಟೆ ಎಳ್ಳುಂಡೆ ಪಾತ್ರದ ಮೂಲಕ ನಗಿಸುತ್ತಾರೆ. ದಿನೇಶ್ ಮಂಗಳೂರು ಅವರು ಕೂಡ ಖಳಛಾಯೆಯನ್ನು ನಿರ್ವಹಿಸಿದ್ದಾರೆ. ನಿರ್ದೇಶಕರಾಗಿ ‘ಮಳೆ’, ‘ಲೌಡ್ ಸ್ಪೀಕರ್’ನಂತಹ ಸಿನೆಮಾಗಳನ್ನು ನೀಡಿದ್ದ ಶಿವ ತೇಜಸ್ ಅವರಿಂದ ಪ್ರೇಕ್ಷಕರು ಇಂತಹ ಚಿತ್ರಗಳನ್ನು ನಿರೀಕ್ಷಿಸಿರುವುದಿಲ್ಲ. ಎ ಸರ್ಟಿಫಿಕೇಟ್ ಪಡೆದಿರುವ ಶಿವಾರ್ಜುನ ಸಿನೆಮಾ ಕೌಟುಂಬಿಕ ಪ್ರೇಕ್ಷಕರಿಗಂತೂ ಹೇಳಿದಂತಹ ಸಿನೆಮಾ ಖಂಡಿತವಾಗಿ ಅಲ್ಲ.

ತಾರಾಗಣ: ಚಿರಂಜೀವಿ ಸರ್ಜಾ, ಅಮೃತಾ ಅಯ್ಯಂಗಾರ್

ನಿರ್ದೇಶನ: ಶಿವತೇಜಸ್

ನಿರ್ಮಾಣ: ಮಂಜುಳಾ ಶಿವಾರ್ಜುನ

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News