ದಿಲ್ಲಿ: 50ಕ್ಕಿಂತ ಹೆಚ್ಚು ಜನರು ಸೇರುವುದಕ್ಕೆ ನಿಷೇಧ

Update: 2020-03-16 14:29 GMT
ಫೈಲ್ ಫೋಟೊ

ಹೊಸದಿಲ್ಲಿ, ಮಾ. 16: ಕೊರೋನ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೈಟ್ ಕ್ಲಬ್, ಜಿಮ್ ಹಾಗೂ ಸ್ಪಾಗಳನ್ನು ಮಾರ್ಚ್ 31ರ ವರೆಗೆ ಮುಚ್ಚಲಾಗುವುದು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ಘೋಷಿಸಿದ್ದಾರೆ.

‘‘ಎಲ್ಲ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 50ಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ’’ ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಆದರೆ, ಈ ನಿಷೇಧ ವಿವಾಹ ಸಮಾರಂಭಕ್ಕೆ ಅನ್ವಯವಾಗುವುದಿಲ್ಲ ಎಂದು ಹೇಳಿರುವ ಅವರು, ಇಂತಹ ಕಾರ್ಯಕ್ರಮಗಳನ್ನು ಸ್ವಯಂ ಪ್ರೇರಿತವಾಗಿ ಏರ್ಪಡಿಸದಿರಿ ಎಂದು ಮನವಿ ಮಾಡಿದ್ದಾರೆ.

 ವಾರದ ಸಂತೆ ರದ್ದುಗೊಳಿಸಲಾಗಿದೆ. ಪಾವತಿಸಿ ಪ್ರತ್ಯೇಕ ವ್ಯವಸ್ಥೆಯಲ್ಲಿ ಇರಲು ಮೂರು ಹೊಟೇಲ್‌ಗಳನ್ನು ಗುರುತಿಸಲಾಗಿದೆ. ಶಾಲೆ, ಕಾಲೇಜುಗಳಿಗೆ ಕಳೆದ ವಾರವೇ ರಜೆ ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸಾರ್ವಜನಿಕರ ಸಂಕಷ್ಟಗಳನ್ನು ಆಲಿಸಲು ತನ್ನ ಮನೆಯಲ್ಲಿ ವಾರದಲ್ಲಿ ಮೂರು ಬಾರಿ ನಡೆಸುವ ‘ಜನತಾ ಸಂವಾದ’ವನ್ನು ಸದ್ಯ ರದ್ದುಗೊಳಿಸಲಾಗಿದೆ.

ಮುಂಬೈ ನಗರಗಳಂತೆ ಇಲ್ಲಿ ಶಾಪಿಂಗ್ ಮಾಲ್‌ಗಳನ್ನು ಮುಚ್ಚಿಲ್ಲ. ಆದರೆ, ಈ ಮಾಲ್‌ಗಳಲ್ಲಿ ಪ್ರವೇಶ ದ್ವಾರ ಹಾಗೂ ಅಂಗಡಿಗಳಲ್ಲಿ ಕೈ ಸ್ವಚ್ಛಗೊಳಿಸುವ ದ್ರವಗಳನ್ನು ಇರಿಸಲಾಗಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. ಎಲ್ಲಾ ಅಟೋ ಹಾಗೂ ಟ್ಯಾಕ್ಸಿಗಳು ಅಬಾಧಿತವಾಗಿ ಸಂಚರಿಸುತ್ತಿವೆ ಎಂದು ಹೇಳಿದ ಅರವಿಂದ ಕೇಜ್ರಿವಾಲ್, ಕೈ ಸ್ವಚ್ಛಗೊಳಿಸುವ ದ್ರವಗಳನ್ನು ನಗರದ ಹೆಚ್ಚಿನ ಸ್ಥಳಗಳಲ್ಲಿ ಇರಿಸಲಾಗಿದೆ ಎಂದರು. ಭಾರತದಲ್ಲಿ ಕೊರೋನ ವೈರಸ್ ಹರಡಿದ ಬಳಿಕ ದಿಲ್ಲಿಯಲ್ಲಿ 7 ಮಂದಿ ಸೋಂಕಿತರಾಗಿದಾರೆ. ಇವರಲ್ಲಿ ಇಬ್ಬರು ಗುಣಮುಖರಾಗಿದ್ದಾರೆ ಹಾಗೂ ಓರ್ವರು ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News