ಮೊದಲ ಸ್ವದೇಶಿ ಕೊರೋನವೈರಸ್ ತಪಾಸಣಾ ಕಿಟ್ ಹೊರತರಲು ಚೆನ್ನೈ ಕಂಪನಿ ಸಜ್ಜು

Update: 2020-03-17 14:02 GMT
ಫೈಲ್ ಚಿತ್ರ

ಚೆನ್ನೈ,ಮಾ.17: ಭಾರತದಲ್ಲಿ ಶಂಕಿತ ಕೊರೋನವೈರಸ್ ಪ್ರಕರಣಗಳ ತಪಾಸಣೆಗೆ ಸೌಲಭ್ಯಗಳ ಕೊರತೆಯ ಕಳವಳಗಳ ನಡುವೆಯೇ ಚೆನ್ನೈನ ಟ್ರೈವಿಟ್ರಾನ್ ಹೆಲ್ತ್‌ಕೇರ್ ಗ್ರೂಪ್ ಸೋಂಕು ತಪಾಸಣೆಗೆ ದೇಶಿಯ ಕಿಟ್‌ಗಳನ್ನು ತಯಾರಿಸಿದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆ ಪಡೆದುಕೊಳ್ಳಲು ಸಜ್ಜಾಗಿದೆ. ಆದರೆ ಈ ಕಿಟ್ ಸರಕಾರದಿಂದ ಮಾನ್ಯತೆ ಹೊಂದಿರುವ ಕೇಂದ್ರದಲ್ಲಿ ಮೊದಲು ಪರೀಕ್ಷೆಗೆ ಒಳಪಡಬೇಕಿರುವುದರಿಂದ ಮಾರುಕಟ್ಟೆಗೆ ಬಿಡುಗಡೆ ಗೊಳ್ಳಲು 2-3 ವಾರಗಳ ಕಾಲಾವಕಾಶ ಬೇಕಾಗಬಹುದು.

ಕಂಪನಿಯು ಕಿಟ್ ಅಭಿವೃದ್ಧಿಗೊಳಿಸಲು ಕಳೆದೊಂದು ತಿಂಗಳಿ ನಿಂದಲೂ ಶ್ರಮಿಸುತ್ತಿದ್ದು, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಗಣನೀಯ ಯಶಸ್ಸು ಗಳಿಸಿದೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಟ್ರೈವಿಟ್ರಾನ್‌ನ ಸಿಎಂಡಿ ಡಾ.ಜಿಎಸ್‌ಕೆ ವೇಲು ತಿಳಿಸಿದರು.

ಕೊರೋನವೈರಸ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ತನ್ನ ರೋಗನಿರ್ಧಾರ ಮತ್ತು ತಪಾಸಣೆ ವ್ಯವಸ್ಥೆಯನ್ನು ಬಲಪಡಿಸಲು ಸಜ್ಜಾಗಿರುವ ಕೇಂದ್ರ ಸರಕಾರವು 10 ಲಕ್ಷ ತಪಾಸಣಾ ಕಿಟ್‌ಗಳ ಪೂರೈಕೆಗಾಗಿ ಜರ್ಮನಿಗೆ ಬೇಡಿಕೆ ಸಲ್ಲಿಸಿದೆ ಎನ್ನಲಾಗಿದೆ. ಆದರೆ ಈವರೆಗೂ ಅದು ಆಮದು ಕಿಟ್‌ಗಳನ್ನು ಅವಲಂಬಿಸಿದೆ ಮತ್ತು ಹೆಚ್ಚಿನ ವಿಮಾನಯಾನಗಳು ಸ್ಥಗಿತಗೊಂಡಿರುವುದರಿಂದ ವಿದೇಶ ಗಳಿಂದ ಕಿಟ್‌ಗಳ ಪೂರೈಕೆಗೂ ವ್ಯತ್ಯಯವಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಕಿಟ್‌ಗಳ ತಯಾರಿಕೆ ಸರಕಾರಕ್ಕೆ ಹೆಚ್ಚಿನ ಅನುಕೂಲ ವನ್ನುಂಟು ಮಾಡಲಿದೆ.

ಕೊರೋನವೈರಸ್ ಸೋಂಕು ಈಗಾಗಲೇ ದೇಶದಲ್ಲಿ ಮೂವರನ್ನು ಬಲಿ ತೆಗೆದುಕೊಂಡಿದ್ದು,ಕನಿಷ್ಠ 126 ಜನರು ಸೋಂಕಿನಿಂದ ನರಳುತ್ತಿದ್ದಾರೆ. ಸೋಂಕಿತ ವ್ಯಕ್ತಿಗಳ ಸಂಖ್ಯೆ ಇನ್ನೂ ಹೆಚ್ಚಾಗಿರ ಬಹುದು ಎಂದು ಭೀತಿಯನ್ನು ವ್ಯಕ್ತಪಡಿಸಿರುವ ಹಲವಾರು ತಜ್ಞರು, ತನ್ನ ಸೀಮಿತ ತಪಾಸಣೆ ಸೌಲಭ್ಯಗಳಿಂದಾಗಿ ಅಂತಹವರನ್ನು ಗುರುತಿಸುವಲ್ಲಿ ಸರಕಾರವು ವಿಫಲವಾಗಿದೆ ಎಂದಿದ್ದಾರೆ.

 ತನ್ನ ಕಂಪನಿಯ ಕಿಟ್‌ಗಳು ಆಮದು ಕಿಟ್‌ಗಳ ಅರ್ಧ ಬೆಲೆಗೆ ಲಭ್ಯವಾಗಲಿವೆ ಎಂದು ಭರವಸೆ ನೀಡಿದ ಡಾ.ವೇಲು, ಪ್ರಮಾಣ ವನ್ನು ಅವಲಂಬಿಸಿ 500 ರೂ.ನಿಂದ 1,000 ರೂ.ವರೆಗೆ ಬೆಲೆಗಳಲ್ಲಿ ಈ ಕಿಟ್‌ಗಳನ್ನು ಮಾರಾಟ ಮಾಡಲು ಉದ್ದೇಶಿಸಲಾಗಿದೆ ಎಂದರು.

 ಆದರೆ ಈ ಕಿಟ್‌ಗಳನ್ನು ಸರಕಾರಿ ತಪಾಸಣಾ ಕೇಂದ್ರಗಳಿಗೆ ಮಾತ್ರ ಅಥವಾ ಖಾಸಗಿ ಆಸ್ಪತ್ರೆಗಳು ಮತ್ತು ಲ್ಯಾಬ್‌ಗಳಿಗೂ ಮಾರಾಟ ಮಾಡಲಾಗುವುದೇ ಎಂಬ ಬಗ್ಗೆ ಈವರೆಗೆ ಯಾವುದೇ ಸ್ಪಷ್ಟತೆಯಿಲ್ಲ. ಸರಕಾರವು ಮುಂದಿನ ದಿನಗಳಲ್ಲಿ ಮಾನ್ಯತೆಯನ್ನು ಹೊಂದಿರುವ 50-60 ಖಾಸಗಿ ಲ್ಯಾಬ್‌ಗಳಿಗೂ ತಪಾಸಣೆ ನಡೆಸಲು ಅನುಮತಿ ನೀಡಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಈ ಬಗ್ಗೆ ನಮಗೆ ಸರಕಾರದಿಂದ ಯಾವುದೇ ನಿರ್ದೇಶನ ಅಥವಾ ಮಾರ್ಗದರ್ಶನ ಬಂದಿಲ್ಲ ಎಂದು ಹೇಳಿದ ಡಾ.ವೇಲು,ಕಂಪನಿಯು ಪ್ರತಿದಿನ 750,000 ಕಿಟ್‌ಗಳ ತಯಾರಿಕೆ ಸಾಮರ್ಥ್ಯ ಹೊಂದಿದೆ ಎಂದರು. ಮುಂದಿನ ದಿನಗಳಲ್ಲಿ ಕಿಟ್‌ಗಳನ್ನು ವಿದೇಶಗಳಿಗೆ ರಫ್ತು ಮಾಡುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News