ಅಪರಾಧದ ದಿನದಂದು ತಾನು ದಿಲ್ಲಿಯಲ್ಲಿರಲಿಲ್ಲ: ನಿರ್ಭಯಾ ಪ್ರಕರಣದ ಆರೋಪಿಯ ಅರ್ಜಿ ವಜಾ

Update: 2020-03-17 14:09 GMT

ಹೊಸದಿಲ್ಲಿ,ಮಾ.17: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ದೋಷಿಗಳು ನೇಣುಗಂಬವನ್ನೇರಲು ಮೂರು ದಿನಗಳು ಬಾಕಿ ಇರುವಂತೆ ಅವರ ಪೈಕಿ ಮುಕೇಶ ಕುಮಾರ ಸಿಂಗ್,ತಾನು ಅಪರಾಧದ ದಿನದಂದು ದಿಲ್ಲಿಯಲ್ಲಿರಲಿಲ್ಲ,ಹೀಗಾಗಿ ಮರಣದಂಡನೆ ಜಾರಿಗೆ ತಡೆಯಾಜ್ಞೆ ನೀಡುವಂತೆ ಕೋರಿ ಮಂಗಳವಾರ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದು,ಅದನ್ನು ನ್ಯಾಯಾಲಯವು ವಜಾಗೊಳಿಸಿದೆ.

ಅಪರಾಧ ನಡೆದ ಒಂದು ದಿನದ ಬಳಿಕ,ಅಂದರೆ 2012,ಡಿ.17ರಂದು ತನ್ನನ್ನು ರಾಜಸ್ಥಾನದಲ್ಲಿ ಬಂಧಿಸಿ ದಿಲ್ಲಿಗೆ ಕರೆತರಲಾಗಿತ್ತು ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧಮೇಂದ್ರ ರಾಣಾ ಅವರಿಗೆ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿದ್ದ ಸಿಂಗ್,ತನಗೆ ತಿಹಾರ್ ಜೈಲಿನಲ್ಲಿ ಚಿತ್ರಹಿಂಸೆ ನೀಡಲಾಗಿತ್ತು ಎಂದೂ ಆರೋಪಿಸಿದ್ದ.

ಸಿಂಗ್ ಅರ್ಜಿಯಲ್ಲಿ ಯಾವುದೇ ತಿರುಳಿಲ್ಲ ಮತ್ತು ಇದು ಗಲ್ಲು ಜಾರಿಯನ್ನು ವಿಳಂಬಿಸುವ ತಂತ್ರವಾಗಿದೆ ಎಂದು ಸರಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ತಿಳಿಸಿದರು.

ಎಲ್ಲ ನಾಲ್ವರೂ ಆರೋಪಿಗಳನ್ನು ಮಾ.20ರಂದು ಬೆಳಿಗ್ಗೆ 5:30 ಗಂಟೆಗೆ ಗಲ್ಲಿಗೇರಿಸುವಂತೆ ನ್ಯಾಯಾಲಯವು ಈಗಾಗಲೇ ವಾರಂಟ್ ಹೊರಡಿಸಿದೆ. ಇದು ದೋಷಿಗಳ ವಿರುದ್ಧ ನಾಲ್ಕನೇ ವಾರಂಟ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News