×
Ad

ಪೊಲೀಸರಿಂದ ಕಿರುಕುಳ ಆರೋಪ: ಹೈಕೋರ್ಟ್‌ಗೆ ತಮಿಳು ನಟ ಕಮಲ್ ಹಾಸನ್ ದೂರು

Update: 2020-03-17 20:37 IST
ಫೈಲ್ ಚಿತ್ರ

ಚೆನ್ನೈ,ಮಾ.17: ‘ಇಂಡಿಯನ್ 2’ಚಿತ್ರದ ಸೆಟ್ಸ್‌ನಲ್ಲಿ ಸಂಭವಿಸಿದ್ದ ಅವಘಡಕ್ಕೆ ಸಂಬಂಧಿಸಿದಂತೆ ಮಾ.3ರಂದು ತಾನು ಕಮಿಷನರ್ ಕಚೇರಿಗೆ ಹಾಜರಾಗಿದ್ದಾಗ ಚೆನ್ನೈ ಪೊಲೀಸರು ತನಗೆ ಕಿರುಕುಳವನ್ನು ನೀಡಿದ್ದರು ಎಂದು ಆರೋಪಿಸಿ ಖ್ಯಾತ ನಟ ಕಮಲ್ ಹಾಸನ್ ಅವರು ಮದ್ರಾಸ್ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಾರೆ. ಪೊಲೀಸರು ತನಗೆ ವಿರಾಮವನ್ನೂ ನೀಡದೇ ಸತತ ಮೂರು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಲೈಕಾ ಪ್ರೊಡಕ್ಷನ್ಸ್ ಚಿತ್ರವನ್ನು ನಿರ್ಮಿಸುತ್ತಿದ್ದು ತಾನು ಕೇವಲ ಅದರಲ್ಲಿ ನಟಿಸುತ್ತಿದ್ದೇನೆ,ಹೀಗಾಗಿ ಅವಘಡದ ಸ್ಥಳದಲ್ಲಿ ಸನ್ನಿವೇಶದ ಮರುಸೃಷ್ಟಿಗಾಗಿ ತನ್ನ ಉಪಸ್ಥಿತಿಯು ಅಗತ್ಯವಿಲ್ಲ ಎಂದು ತಿಳಿಸಿರುವ ಹಾಸನ್,ಓರ್ವ ನಾಯಕ ನಟನನ್ನು ವಿಚಾರಣೆಗೊಳಪಡಿಸಿದ ಪೂರ್ವ ನಿದರ್ಶನಗಳಿಲ್ಲ ಎಂದಿದ್ದಾರೆ.

ಇದಕ್ಕೂ ಮುನ್ನ ಪೊಲೀಸರ ಮೂಲಕ ಹಾಸನ್‌ಗೆ ಕಿರುಕುಳ ನೀಡುವುದನ್ನು ನಿಲ್ಲಿಸುವಂತೆ ತಮಿಳುನಾಡು ಸರಕಾರಕ್ಕೆ ಸೂಚಿಸಿ ಅವರ ಪಕ್ಷ ಮಕ್ಕಳ್ ನೀಧಿ ಮೈಯಮ್ ಹೇಳಿಕೆಯನ್ನು ಹೊರಡಿಸಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಉತ್ತಮ ಪ್ರಮಾಣದಲ್ಲಿ ಮತಗಳನ್ನು ಗಳಿಸಿದ್ದರಿಂದ ರಾಜ್ಯ ಸರಕಾರವು ಉದ್ದೇಶಪೂರ್ವಕವಾಗಿ ಈ ಕೃತ್ಯವನ್ನು ಮಾಡುತ್ತಿದೆ ಎಂದೂ ಅದು ಆರೋಪಿಸಿತ್ತು.

ಚೆನ್ನೈ ಸಮೀಪದ ಇವಿಪಿ ಫಿಲ್ಮ್ ಸಿಟಿಯಲ್ಲಿ ಇಂಡಿಯನ್ 2 ಚಿತ್ರೀಕರಣದ ಸಂದರ್ಭದಲ್ಲಿ ಸಂಭವಿಸಿದ್ದ ಕ್ರೇನ್ ಅವಘಡದಲ್ಲಿ ಮೂವರು ಸಹಾಯಕ ನಿರ್ದೇಶಕರು ಮೃತಪಟ್ಟು,ಇತರ ಒಂಭತ್ತು ಜನರು ಗಾಯಗೊಂಡಿದ್ದರು. ಹಾಸನ್ ಮತ್ತು ನಿರ್ದೇಶಕ ಶಂಕರ ಕೂದಲೆಳೆಯ ಅಂತರದಿಂದ ಅಪಾಯದಿಂದ ಪಾರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News