ಪತ್ರಿಕಾ ರಂಗದ ನಾಡೋಜ ಪಾಟೀಲ ಪುಟ್ಟಪ್ಪ

Update: 2020-03-17 18:22 GMT

ಪಾಟೀಲ ಪುಟ್ಟಪ್ಪ ಅವರ ದೃಷ್ಟಿಯಲ್ಲಿ ಪತ್ರಿಕೋದ್ಯಮ ಎನ್ನುವುದು ಬದುಕಿನ ಮಹಾಕಾವ್ಯವಾಗಿದೆ. ಅವರು ಇಡೀ ಜೀವನ ಬದುಕಿದ್ದು ಮತ್ತು ಇದುವರೆಗೂ ಕ್ರಿಯಾಶೀಲವಾಗಿದ್ದುದು ಪತ್ರಿಕೋದ್ಯಮದ ಗುಂಗಿನಲ್ಲಿ ಮತ್ತು ಅದು ಮೂಡಿಸಿದ ಜಾಗೃತಿಯಲ್ಲಿ. ಅವರ ಮನೋಪ್ರಪಂಚದಲ್ಲಿ ಪತ್ರಿಕೆಯದೇ ಸಿಂಹಪಾಲು. ಅವರು ತಮ್ಮ ಎಲ್ಲ ಸೃಜನಶಕ್ತಿಯನ್ನು ಮಾನವಘನತೆಯ ರಕ್ಷಣೆಗಾಗಿ ಬಳಸಿದ್ದರು. ಅದಕ್ಕಾಗಿ ಪ್ರಪಂಚ ಮತ್ತು ವಿಶ್ವದ ವಾಣಿಯಾಗುವ ಹೆಬ್ಬಯಕೆಯನ್ನು ಹೊಂದಿದ್ದರು. ಬದುಕಿನುದ್ದಕ್ಕೂ ಹಾಗೆ ನಡೆದುಕೊಂಡರು. ಪತ್ರಿಕಾರಂಗದಿಂದ ಅವರಿಗೆ ವೈಯಕ್ತಿಕವಾಗಿ ಸಂಪತ್ತು ಸಿಗಲಿಲ್ಲ. ಆದರೆ ಕನ್ನಡಿಗರಿಗೆ ಅವರೇ ದೊಡ್ಡ ಸಂಪತ್ತಾದರು.


ಅಮೆರಿಕದ ಮಿಸೌರಿ ನಗರದ ಪತ್ರಿಕೋದ್ಯೋಗ ಕಲಾಶಾಲೆಯ ಸ್ಥಾಪಕ ವಾಲ್ಟರ್ಸ್ ವಿಲಿಯಮ್ಸ್ ರಚಿಸಿದ ಪತ್ರಿಕೋದ್ಯೋಗಿಯ ಪ್ರತಿಜ್ಞೆ ಇಂದಿಗೂ ಪ್ರಸ್ತುತವಾಗಿದೆ. 1. ನಾನು ನಂಬಿದ್ದೇನೆ- ಪತ್ರಿಕೋದ್ಯೋಗವು ಯೋಗ್ಯ ವೃತ್ತಿಯೆಂದು.

2. ನಾನು ನಂಬಿದ್ದೇನೆ- ಸಾರ್ವಜನಿಕ ಪತ್ರಿಕೆಯು ಮಹಾಜನರ ಟ್ರಸ್ಟ್ ಎಂದು.
3. ನಾನು ನಂಬಿದ್ದೇನೆ- ಸರಳವಾದ ವಿಚಾರ ಸರಣಿ, ವಿಶದವಾದ ನಿರೂಪಣೆ, ನಿಷ್ಕರ್ಷೆ, ನ್ಯಾಯನಿಷ್ಠೆ, ಇವು ಒಳ್ಳೆಯ ಪತ್ರಕರ್ತನ ಮೂಲ ಲಕ್ಷಣಗಳೆಂದು.
4. ನಾನು ನಂಬಿದ್ದೇನೆ-ಪತ್ರಕರ್ತನು ತನ್ನ ಹೃದಯದಲ್ಲಿ ತಾನು ನಿಜವೆಂದು ದೃಢಪಡಿಸಿಕೊಂಡಿದ್ದನ್ನೇ ಬರೆಯಬೇಕೆಂದು.
5. ನಾನು ನಂಬಿದ್ದೇನೆ- ಸಮಾಜಕ್ಷೇಮ ಒಂದರ ಹೊರತು ಮತ್ತಾವ ಕಾರಣಕ್ಕಾಗಿಯೂ ಪತ್ರಕರ್ತನು ಯಾವ ವರ್ತಮಾನವನ್ನೂ ಮುಚ್ಚಿಡುವುದು ಯುಕ್ತವಲ್ಲವೆಂದು.
6. ನಾನು ನಂಬಿದ್ದೇನೆ- ದೊಡ್ಡ ಮನುಷ್ಯನಾದವನು ನುಡಿಯಬಾರದಂತಹ ಮಾತನ್ನು ಪತ್ರಕರ್ತನು ಬರೆಯಬಾರದೆಂದು.
7. ನಾನು ನಂಬಿದ್ದೇನೆ- ಒಳ್ಳೆಯ ಪತ್ರಿಕೋದ್ಯೋಗದ ಯೋಗ್ಯತಾ ಪರೀಕ್ಷೆಯು ಅದು ಮಾಡುತ್ತಿರುವ ಸಮಾಜಸೇವೆಯ ಮಟ್ಟದಿಂದ ನಿರ್ಣಯವಾಗುತ್ತದೆ ಎಂದು.
8. ನಾನು ನಂಬಿದ್ದೇನೆ- ಪತ್ರಿಕೋದ್ಯೋಗವು ದೇವರಲ್ಲಿ ಭಯವೂ, ಮನುಷ್ಯನಲ್ಲಿ ಗೌರವವೂ ಉಳ್ಳದ್ದೆಂದು... ಅನ್ಯಾಯ ಕಂಡೊಡನೆ ಅದು ಕೆರಳುವುದೆಂದು. ಅದು ಪ್ರತಿಷ್ಠಾ ಹಂತದ ಪ್ರೇರಣೆಯಿಂದಾಗಲಿ, ದೊಂಬಿಕೂಟದಿಂದಾಗಲಿ ದಾರಿ ತಪ್ಪಲಾರದೆಂದು.

ಪತ್ರಿಕಾರಂಗದ ಈ ಅಷ್ಟ ನೀತಿಸೂತ್ರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬದುಕಿನುದ್ದಕ್ಕೂ ಪಾಲಿಸಿದ ಶ್ರೇಯಸ್ಸು ಪಾಟೀಲ ಪುಟ್ಟಪ್ಪನವರಿಗೆ ಸಲ್ಲುತ್ತದೆ. ದೇಶದ ಪತ್ರಿಕಾರಂಗದಲ್ಲಿನ ಹೊಳೆಯುವ ನಕ್ಷತ್ರಗಳಲ್ಲಿ ಪಾಟೀಲ ಪುಟ್ಟಪ್ಪ ಅವರೂ ಒಬ್ಬರಾಗಿದ್ದಾರೆ. ಅಮೆರಿಕದಲ್ಲಿ ಪತ್ರಿಕಾ ಶಿಕ್ಷಣವನ್ನು ಪಡೆದೂ ತಾಯ್ನಿಡಿನಲ್ಲಿ ಕನ್ನಡ ಪತ್ರಿಕೋದ್ಯಮ ಬೆಳೆಸಿದಂತಹ ಧೀಮಂತ ವ್ಯಕ್ತಿತ್ವ ಅವರದು. ಅವರು ಇಂಗ್ಲಿಷ್ ಪತ್ರಿಕೋದ್ಯಮಕ್ಕೆ ಸೇರಿದ್ದರೆ ದೇಶಪ್ರಸಿದ್ಧ ಪತ್ರಕರ್ತರಾಗಿರುತ್ತಿದ್ದರು. ಆದರೆ ಕನ್ನಡ ಭಾಷೆ, ಸಂಸ್ಕೃತಿ ಮತ್ತು ನೆಲಜಲದ ಮೇಲಿನ ಅಭಿಮಾನದಿಂದ ಅವರು ಇಲ್ಲಿ ಉಳಿದರು. ಆದರೆ ವಿಶ್ವವನ್ನೇ ತಮ್ಮ ಮನೆಯಾಗಿಸಿಕೊಂಡು ಮತ್ತು ಮಾನವಕುಲವನ್ನೇ ತಮ್ಮ ಕುಟುಂಬವಾಗಿಸಿಕೊಂಡು ಉಳಿದರು! ಅವರನ್ನು ಕಂಡಾಗಲೆಲ್ಲ ನನಗೆ ಬಸವಣ್ಣನವರ ‘‘ನ್ಯಾಯ ನಿಷ್ಠುರಿ; ದಾಕ್ಷಿಣ್ಯಪರ ನಾನಲ್ಲ, ಲೋಕವಿರೋಧಿ; ಶರಣನಾರಿಗಂಜುವನಲ್ಲ; ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ.’’ ವಚನ ನೆನಪಾಗುತ್ತದೆ.

ಅವರ ದೃಷ್ಟಿಯಲ್ಲಿ ಪತ್ರಿಕೋದ್ಯಮ ಎನ್ನುವುದು ಬದುಕಿನ ಮಹಾಕಾವ್ಯ ವಾಗಿದೆ. ಅವರು ಇಡೀ ಜೀವನ ಬದುಕಿದ್ದು ಮತ್ತು ಇದುವರೆಗೂ ಕ್ರಿಯಾಶೀಲವಾಗಿದ್ದು ಪತ್ರಿಕೋದ್ಯಮದ ಗುಂಗಿನಲ್ಲಿ ಮತ್ತು ಅದು ಮೂಡಿಸಿದ ಜಾಗೃತಿಯಲ್ಲಿ. ಅವರ ಮನೋಪ್ರಪಂಚದಲ್ಲಿ ಪತ್ರಿಕೆಯದೇ ಸಿಂಹಪಾಲು. ಅವರು ತಮ್ಮ ಎಲ್ಲ ಸೃಜನಶಕ್ತಿಯನ್ನು ಮಾನವಘನತೆಯ ರಕ್ಷಣೆಗಾಗಿ ಬಳಸಿದ್ದರು. ಅದಕ್ಕಾಗಿ ಪ್ರಪಂಚ ಮತ್ತು ವಿಶ್ವದ ವಾಣಿಯಾಗುವ ಹೆಬ್ಬಯಕೆಯನ್ನು ಹೊಂದಿದ್ದರು. ಬದುಕಿನುದ್ದಕ್ಕೂ ಹಾಗೆ ನಡೆದುಕೊಂಡರು. ಪತ್ರಿಕಾರಂಗದಿಂದ ಅವರಿಗೆ ವೈಯಕ್ತಿಕವಾಗಿ ಸಂಪತ್ತು ಸಿಗಲಿಲ್ಲ. ಆದರೆ ಕನ್ನಡಿಗರಿಗೆ ಅವರೇ ದೊಡ್ಡ ಸಂಪತ್ತಾದರು. ಕನ್ನಡ ಭಾಷೆಯ ಬಗೆಗಿನ ಅವರ ಜ್ಞಾನ ಅಪಾರವಾದುದು. ಕನ್ನಡ ಎಂಬುದು ಅವರಿಗೆ ಬರೀ ‘‘ರ ಠ ಈ ಕ, ಗ ಇ ಞ ಣ’’ ಆಗಿರಲಿಲ್ಲ. ಅದೊಂದು ದೊಡ್ಡ ಪರಂಪರೆಯಾಗಿರುವುದನ್ನು ಅವರು ಅನುಭವಿಸಿದರು, ಅನುಭಾವಿಸಿದರು. ಕನ್ನಡ ಸಂಸ್ಕೃತಿಯ ಮಡಿಲು ಸೇರಿ ಅದರೊಂದಿಗೆ ಒಂದಾಗಿ ಬೆರೆತ ಅನೇಕ ಸಂಸ್ಕೃತಿಗಳನ್ನು ಗುರುತಿಸಿ ಕನ್ನಡದ ಬಹುತ್ವ ಸಂಸ್ಕೃತಿಯ ಹಿರಿಮೆಯನ್ನು ಎತ್ತಿಹಿಡಿದರು. ಕುವೆಂಪು ಅವರು ಹೇಳುವಂತಹ ‘‘ನಮ್ಮದು ಸರ್ವಜನಾಂಗದ ಶಾಂತಿಯ ತೋಟ’’ಎಂಬುದನ್ನು ಪಾಪು ತಮ್ಮ ಬದುಕಿನ ಮೂಲಕ ಎತ್ತಿ ತೋರಿಸಿದರು. ತಮ್ಮ ವಿಶ್ವಪ್ರಜ್ಞೆಯಲ್ಲಿ ಕನ್ನಡ ನಿರಂತರವಾಗಿ ಬೆಳಗುವಂತೆ ಮಾಡಿದರು.

ಈ ಸಂದರ್ಭದಲ್ಲಿ ಅವರ ಗರಡಿಯಲ್ಲಿ ಬೆಳೆದ ದಿವಂಗತ ಐ.ಕೆ. ಜಾಗೀರದಾರ ಅವರು ನೆನಪಾಗುತ್ತಾರೆ. ನಾ ಕಂಡ ಕೆಲವೇ ಅದ್ಭುತ ಪತ್ರಕರ್ತರಲ್ಲಿ ಐ.ಕೆ. ಜಾಗೀರದಾರ ಕೂಡ ಒಬ್ಬರು. ಪತ್ರಿಕಾರಂಗವನ್ನು ಸೃಜನಶೀಲಗೊಳಿಸಿದವರಲ್ಲಿ ಅವರೂ ಒಬ್ಬರು. ಪತ್ರಿಕೆಗೆ ಬೇಕಾದ ಸರಳ ಮತ್ತು ಸಂದಿಗ್ಧತೆ ಇಲ್ಲದ ವಿಶಿಷ್ಟ ಭಾಷಾಶೈಲಿಯನ್ನು ಅವರು ಹೊಂದಿದ್ದರು. ಓದುಗರ ಮನಸ್ಸಿನಲ್ಲಿ ಪ್ರತಿಮೆಗಳನ್ನು ಸೃಷ್ಟಿಸುವ ಹಾಗೆ ಅವರು ಸಣ್ಣ ವಾಕ್ಯಗಳನ್ನು ಬರೆಯುತ್ತಿದ್ದರು. ಸಾಹಿತ್ಯದ ಬರವಣಿಗೆಯಲ್ಲಿ ಪ್ಯಾರಾಗಳನ್ನು ಮಾಡುವುದಕ್ಕೂ ಪತ್ರಿಕೆಯಲ್ಲಿ ಪ್ಯಾರಾಗಳನ್ನು ಮಾಡುವುದಕ್ಕೂ ವ್ಯತ್ಯಾಸವಿದೆ. ‘‘ಓದುಗರಿಗೆ ನಮ್ಮ ಬರವಣಿಗೆ ಯಾವುದೇ ರೀತಿಯಲ್ಲಿ ಹೊರೆಯಾಗಬಾರದು’’ ಎಂಬ ಜವಾಬ್ದಾರಿ ಪತ್ರಕರ್ತನ ಮೇಲೆ ಇರುತ್ತದೆ. ಪತ್ರಿಕೆ ಓದುಗರಲ್ಲಿ ವಿದ್ಯಾರ್ಥಿಗಳು, ನವಸಾಕ್ಷರರು ಮತ್ತು ಬಹಳ ಕಡಿಮೆ ಓದಿದವರೂ ಇರುತ್ತಾರೆ. ಪತ್ರಿಕೆ ಓದುವವರು ಮೇಧಾವಿಗಳಿಂದ ಹಿಡಿದು ವಿವಿಧ ಸ್ತರಗಳ ಜನರಿರುತ್ತಾರೆ. ಅವರಲ್ಲಿನ ಯಾರಿಗೂ ಕಿರಿಕಿರಿಯಾಗದ ಹಾಗೆ ಶಬ್ದಪ್ರಯೋಗ, ವಾಕ್ಯರಚನೆ ಮತ್ತು ಪ್ಯಾರಾಗಳು ಇರಬೇಕು. ಕೆಲವೊಂದು ಸಲ ಇಂಗ್ಲಿಷ್ ಭಾಷೆಯಲ್ಲಿನ ಸುದ್ದಿಯನ್ನು ಅನುವಾದ ಮಾಡುವಾಗ ಜನಸಾಮಾನ್ಯರಿಗೆ ತಿಳಿಯುವಂತಹ ಕನ್ನಡ ಶಬ್ದಗಳನ್ನು ಹುಡುಕಬೇಕಾಗುವುದು. ಸಿಗದೇ ಇದ್ದಾಗ ಶಬ್ದಸೃಷ್ಟಿ ಮಾಡಬೇಕಾಗುವುದು. ಇದನ್ನೆಲ್ಲ ಜಾಗೀರದಾರರು ತಪಸ್ಸಿನ ಹಾಗೆ ಮಾಡುತ್ತಿದ್ದರು.

ಸಾಹಿತ್ಯ ಮತ್ತು ಭಾಷಾವಿಜ್ಞಾನದ ವಿದ್ಯಾರ್ಥಿಯಾಗಿದ್ದ ನಾನು ಪತ್ರಿಕಾ ರಂಗಕ್ಕೆ ಬಂದ ನಂತರ, ಹಿರಿಯ ಪತ್ರಿಕಾ ಸಹೋದ್ಯೋಗಿ ಜಾಗೀರದಾರರ ಕರ್ತೃತ್ವಶಕ್ತಿಯನ್ನು ಕಂಡು ಬೆರಗಾಗಿದ್ದೆ. ಅವರೇನು ಹೆಚ್ಚು ಓದಿದವರಾಗಿದ್ದಿಲ್ಲ. ಆದರೆ ಅವರ ಅಗಾಧ ಪ್ರತಿಭೆ, ಸಮಯ ಪ್ರಜ್ಞೆ ಮತ್ತು ಜನರ ಮನಮುಟ್ಟುವಂತೆ ಬರೆಯುವ ಕಲೆಯ ಮುಂದೆ ಎಲ್ಲರೂ ತಲೆಬಾಗುತ್ತಿದ್ದರು. ‘‘ಇದೆಲ್ಲ ಎಲ್ಲಿ ಕಲಿತಿರಿ?’’ ಎಂದು ನಾನೊಮ್ಮೆ ಕೇಳಿದ್ದೆ. ಆಗ ಅವರು ‘‘ನಾನು ಪಾಟೀಲ ಪುಟ್ಟಪ್ಪನವರ ಶಿಷ್ಯ, ಅವರೇ ನನಗೆ ಪತ್ರಿಕಾರಂಗದ ವಿದ್ಯಾಗುರು. ಅವರ ಜ್ಞಾನ ನನ್ನ ಬದುಕಿಗೆ ಬೆಳಕಾಯಿತು’’ ಎಂದು ಬಹಳ ಹೆಮ್ಮೆಯಿಂದ ಹೇಳಿದರು. ‘‘ಜಾಗೀರದಾರ ಅವರು ಪಾಪು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವೀಧರ’’ ಎಂದು ಹೆಮ್ಮೆ ಪಟ್ಟೆ. ಪಾಟೀಲ ಪುಟ್ಟಪ್ಪನವರ ವ್ಯಕ್ತಿತ್ವವನ್ನು ಅರಿಯಲು ಇಂತಹ ಮಾತುಗಳು ನೆರವಿಗೆ ಬರುತ್ತವೆ. ಪಾಪು ಜೊತೆಗಿನ ನನ್ನ ಸಂಬಂಧ ನಾಲ್ಕು ದಶಕಗಳದ್ದಾಗಿದೆ. ಮೊದಲ ಭೇಟಿಯೊಂದು ಅಮೃತಘಳಿಗೆ. ಆದರೆ ಅವರ ‘ಪ್ರಪಂಚ’ದ ಜೊತೆಗಿನ ನನ್ನ ಸಂಬಂಧ ಇನ್ನೂ ಹಳೆಯದು. ನಾನು ಹೈಸ್ಕೂಲಿನಲ್ಲಿದ್ದಾಗ ಗ್ರಂಥಾಲಯ ಟೇಬಲ್ ಮೇಲೆ ಮೊದಲು ‘ಪ್ರಪಂಚ’ ಹುಡುಕುತ್ತಿದ್ದೆ. ಅದೊಂದು ಖುಷಿ ಕೊಡುವ ಅನುಭವ. ಅದರ ಸಾಧಾರಣ ಹಾಳೆಗಳಲ್ಲಿ ಅಸಾಧಾರಣ ಮತ್ತು ಆಪ್ಯಾಯಮಾನವಾದ ವಿಚಾರಗಳಿರುತ್ತಿದ್ದವು.

ಅನುಭವದ ಅಮೃತತ್ವದ ಜೊತೆ ದೇಶ ವಿದೇಶದ ರಾಜಕೀಯ ನಾಯಕರ ಕುರಿತೂ ಮಾಹಿತಿ ಇರುತ್ತಿತ್ತು. ಲೋಕಾನುಭವ ಮಾತುಗಳು ರಂಜಕತೆಯಿಂದ ಕೂಡಿರುತ್ತಿದ್ದು ಸಾಹಿತ್ಯದ ಆಕರ್ಷಣೆಯನ್ನು ಹೊಂದಿರುತ್ತಿದ್ದವು. ರಾಜಕೀಯ ನಾಯಕರ ಮೇಲಿನ ಟಿಪ್ಪಣಿಗಳು ಸಾಮಾನ್ಯ ಜ್ಞಾನಕ್ಕೆ ಬಹು ಉಪಯೋಗಿಯಾಗಿದ್ದವು. ಸಾಹಿತ್ಯ ಮತ್ತು ರಾಜಕೀಯ ಜ್ಞಾನದ ಕಡೆಗೆ ನನ್ನ ಮನಸ್ಸು ಹೊರಳಲು ಬಹುಶಃ ಈ ‘ಪ್ರಪಂಚ’ವೇ ಕಾರಣವಾಗಿರಬೇಕು. ನಂತರ ಭಾಷಾ ವಿಜ್ಞಾನ ಮತ್ತು ಕೃಷಿ ಮಾರಾಟ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದರೂ ಏನೂ ಗೊತ್ತಿಲ್ಲದ ಪತ್ರಿಕಾ ರಂಗವನ್ನೇ ಆಯ್ಕೆ ಮಾಡಿಕೊಂಡಿದ್ದಕ್ಕೂ ಅದುವೇ ಕಾರಣವಿರಬೇಕು.

ನನ್ನ ಬಗೆಗಿನ ಅವರ ಪ್ರೀತಿಗೆ ನಾನು ಸದಾ ಋಣಿಯಾಗಿದ್ದೇನೆ. ಅವರ ನೆನಪು ಅಗಾಧವಾದುದು ‘‘ನೀವು ಕಳೆದ ಸಲ ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಪತ್ರಿಕೆಯಲ್ಲಿ ನೋಡಿದೆ. ನೀವು ಭೇಟಿಯಾಗಲಿಲ್ಲ. ಫೋನ್ ಕೂಡ ಮಾಡಲಿಲ್ಲ’’ ಎಂದು ಹೇಳಿದಾಗ ಬಹಳ ಮುಜುಗರವಾಗುತ್ತಿತ್ತು. ನಾನು ಬೆಂಗಳೂರಿನಲ್ಲಿದ್ದಾಗ ಅವರು ಸಮಯ ಸಿಕ್ಕಾಗಲೆಲ್ಲ ಪತ್ರಿಕಾ ಕಚೇರಿಗೆ ಬರುತ್ತಿದ್ದರು. ರಿಷಪ್ಷನ್ ಬಳಿ ಬಂದು ಫೋನ್ ಮಾಡಿಸುತ್ತಿದ್ದರು. ನಂತರ ಇಬ್ಬರು ಕೂಡಿ ಪಕ್ಕದ ಕಾಫಿಹೌಸ್‌ಗೆ ಹೋಗಿ ಕಾಫಿ ಕುಡಿಯುತ್ತ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾತನಾಡುತ್ತಿದ್ದೆವು. ಒಂದು ಸಲ ಅವರು ಬಂದಾಗ ‘‘ಪತ್ರಿಕೆಯ ಮಾಲಕರು ಹುಬ್ಬಳ್ಳಿಗೆ ಬಂದಾಗ ತಮ್ಮನ್ನು ಭೇಟಿಯಾಗುತ್ತಾರೆ. ತಾವೂ ಭೇಟಿಯಾಗಬಹುದಲ್ಲಾ’’ ಎಂದು ಅವರಿಗೆ ಕೇಳಿದೆ. ‘‘ಅವರಿಗೆ ಭೇಟಿಯಾಗುವಷ್ಟು ಸಮಯವಿಲ್ಲ’’ ಎಂದು ಹೇಳಿದರು. ನಂತರ ನಾ ಎಂದೂ ಅವರಿಗೆ ಹಾಗೆ ಕೇಳಲಿಲ್ಲ.

ಹುಬ್ಬಳ್ಳಿಗೆ ಬರುವ ಯಾವುದೇ ದೊಡ್ಡ ರಾಜಕಾರಣಿ, ಪತ್ರಕರ್ತ ಮತ್ತು ಸಾಹಿತಿ ಅವರನ್ನು ಭೇಟಿಯಾಗದೆ ಹೋಗುತ್ತಿರಲಿಲ್ಲ. ಈ ವಿಐಪಿಗಳು ಭೇಟಿಗೆ ಬಂದಾಗ ತಮ್ಮ ಯಾವುದೇ ವೈಯಕ್ತಿಕ ಸಮಸ್ಯೆಗಳನ್ನು ಅವರು ಮಾತಿನಲ್ಲಿ ತರುತ್ತಿರಲಿಲ್ಲ. ದೇಶ, ಸಾಮಾಜಿಕ ಸಮಸ್ಯೆ, ರಾಜಕೀಯ ಕರ್ತವ್ಯಗಳು, ಪತ್ರಿಕೆಯ ಮಹತ್ವ, ನೆನಪಿನ ಅಂಗಳದಲ್ಲಿನ ಮಾರ್ಮಿಕ ಘಟನೆಗಳು ಅವರು ಮಾತನಾಡುವ ವಿಷಯಗಳಾಗಿರುತ್ತಿದ್ದವು. ಅವೆಲ್ಲ ನನ್ನಂತಹವರಿಗೆ ಜ್ಞಾನದ ಆಗರಗಳಾಗಿದ್ದವು. ಶತಾಯುಷಿ ಪುಟ್ಟಪ್ಪನವರು ಇಂದಿಗೂ ಅಂತಹ ಸುಂದರ ನೆನಪಿನ ಅಂಗಳದಲ್ಲೇ ಇರುತ್ತಾರೆ. ಬಡವರ ಬಗ್ಗೆ, ಹದಗೆಟ್ಟ ರಾಜಕೀಯ ಸ್ಥಿತಿಯ ಬಗ್ಗೆ ಮತ್ತು ಸಾಮಾಜಿಕ ನಿಷ್ಕ್ರಿಯತೆಯ ಬಗ್ಗೆ ಮರುಗುತ್ತಾರೆ. ಸಾಹಿತ್ಯ, ರಾಜಕಾರಣ, ಸಿನೆಮಾರಂಗ ಮುಂತಾದ ಕ್ಷೇತ್ರಗಳಲ್ಲಿನ ದೊಡ್ಡವರ ಸಣ್ಣತನದ ಬಗ್ಗೆ ಮತ್ತು ಸಣ್ಣವರ ದೊಡ್ಡತನದ ಬಗ್ಗೆ ವಿವರಿಸುತ್ತಾರೆ. ಅವರ ಮಾತುಗಳು ರಂಜಕತೆಯಿಂದ ಮತ್ತು ಕೆಲವು ಸಲ ವಿಷಾದದಿಂದ ಕೂಡಿರುತ್ತವೆ. ವೈಯಕ್ತಿಕ ಮತ್ತು ಸಾಮಾಜಿಕ ನೈತಿಕತೆಯ ಸಾಕ್ಷಿಪ್ರಜ್ಞೆಯಾಗಿ ಅವರು ತಮ್ಮ ಪತ್ರಿಕಾ ಜೀವನವನ್ನು ಸವೆಸಿದ್ದಾರೆ. ಪತ್ರಿಕೆಯಿಂದ ಅವರು ಯಾವುದೇ ಸಂಪತ್ತನ್ನು ಶೇಖರಿಸಲಿಲ.್ಲ ಆದರೆ ಅವರೇ ಸಾಮಾಜಿಕ ಸಂಪತ್ತಾಗಿ ಪರಿಣಮಿಸಿದ್ದಾರೆ.

ದೇಶ ಎಲ್ಲ ರೀತಿಯಿಂದಲೂ ಹದಗೆಡುತ್ತಿದೆ. ದೇಶದ ಮೇಲೆ ಫ್ಯಾಶಿಸಂನ ಕರಾಳ ಛಾಯೆ ಬಿದ್ದಿದೆ. ಕಾಶ್ಮೀರ ಬಂದಿಖಾನೆಯಾಗಿದೆ. ಜನರಿಗೆ ಬ್ಯಾಂಕುಗಳ ಮೇಲಿನ ವಿಶ್ವಾಸ ಹೋಗುತ್ತಿದೆ. ಶ್ರೀಮಂತರು ಕೋಟಿ ಕೋಟಿ ರೂ. ಸಾಲ ಪಡೆದು ಬ್ಯಾಂಕುಗಳನ್ನು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿದ್ದಾರೆ. ರೈತರು ಹತ್ತಾರು ಸಾವಿರ ರೂಪಾಯಿಗಳ ಬ್ಯಾಂಕ್ ಸಾಲ ತೀರಿಸಲಿಕ್ಕಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಚುನಾವಣಾ ಆಯೋಗ, ರಿಸರ್ವ್ ಬ್ಯಾಂಕ್, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿ.ಬಿ.ಐ. ಮುಂತಾದವು ಸರಕಾರದ ಕೈಗೊಂಬೆಗಳಾಗಿವೆ. ದರೋಡೆಕೋರರು ಕಳ್ಳರನ್ನು ಹಿಡಿಯುತ್ತ ದರ್ಪ ಚಲಾಯಿಸುತ್ತಿದ್ದಾರೆ. ಬಹುಪಾಲ ಮಾಧ್ಯಮದವರು ವ್ಯವಸ್ಥೆಯ ಗುಲಾಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಸರಕಾರ ತಿಂಗಳುಗಟ್ಟಲೆ ಸಂವಹನ ಮೂಲಗಳನ್ನು ನಿರ್ಬಂಧಿಸಿದ್ದನ್ನು ಕೂಡ ಸಮರ್ಥಿಸಿಕೊಳ್ಳುವಷ್ಟರ ಮಟ್ಟಿಗೆ ಪತ್ರಿಕಾ ಮಂಡಳಿ ಹೀನಾಯ ಸ್ಥಿತಿಯನ್ನು ತಲುಪಿದೆ. ಪತ್ರಿಕಾ ಸ್ವಾತಂತ್ರ್ಯ ಎಂಬುದು ಪ್ರಜೆಗಳ ಸ್ವಾತಂತ್ರ್ಯ ಎಂಬ ಕನಿಷ್ಠ ಪ್ರಜ್ಞೆ ಕೂಡ ಅದಕ್ಕೆ ಇಲ್ಲದಂತಾಗಿದೆ. ಜೈ ಶ್ರೀರಾಮ್ ಎನ್ನುತ್ತ ಅಮಾಯಕ ಮುಸ್ಲಿಮರನ್ನು ಮತ್ತು ದಲಿತರನ್ನು ಕೊಲ್ಲಲಾಗುತ್ತಿದೆ. ಈ ಎಲ್ಲ ಅನಿಷ್ಟಗಳನ್ನು ವಿರೋಧಿಸುವವರಿಗೆ ‘ನಗರ ನಕ್ಸಲೈಟರು’ ಎಂದು ಆರೋಪಿಸಲಾಗುತ್ತಿದೆ.

ಇಂತಹ ವಿಷಮ ಗಳಿಗೆಯಲ್ಲಿ ನನಗೆ ನಾಡೋಜ ಪಾಟೀಲ ಪುಟ್ಟಪ್ಪ ಅವರು ಆಶಾಕಿರಣವಾಗಿ ಕಾಣುತ್ತಿದ್ದರು. ನನ್ನಂತಹ ಅನೇಕರ ಬದುಕಿಗೆ ಸ್ಫೂರ್ತಿಯ ಸೆಲೆಯಾಗಿದ್ದರು. ಅವರ ನೆನಪು ನನ್ನಂತಹವರನ್ನು ಸದಾ ಜಾಗೃತವಾಗಿರಿಸುತ್ತದೆ.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News