ಒಮರ್ ಅಬ್ದುಲ್ಲಾರನ್ನು ಬಿಡುಗಡೆ ಮಾಡುವುದಿದ್ದರೆ ಶೀಘ್ರ ಮಾಡಿ: ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಹೊಸದಿಲ್ಲಿ, ಮಾ. 18: ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡುವ ವಿಧಿ 370ನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ರದ್ದುಗೊಳಿಸಿದ ಬಳಿಕ ಗೃಹ ಬಂಧನದಲ್ಲಿ ಇರಿಸಲಾಗಿರುವ ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್‌ನ ಮುಖ್ಯಸ್ಥ ಒಮರ್ ಅಬ್ದುಲ್ಲಾ ಅವರನ್ನು ಬಿಡುಗಡೆ ಮಾಡುತ್ತೀರಾ ಎಂದು ಮುಂದಿನ ವಾರ ತಿಳಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರಕಾರ ಹಾಗೂ ಜಮ್ಮುಕಾಶ್ಮೀರಕ್ಕೆ ಸೂಚಿಸಿದೆ.
ಒಮರ್ ಅಬ್ದುಲ್ಲಾ ಅವರನ್ನು ಕೂಡಲೇ ಬಿಡುಗಡೆ ಮಾಡದೇ ಇದ್ದರೆ, ಅವರ ಗೃಹ ಬಂಧನದ ವಿರುದ್ಧ ಅವರ ಸಹೋದರಿ ಸಾರಾ ಅಬ್ದುಲ್ಲಾ ಪೈಲಟ್ ಸಲ್ಲಿಸಿರುವ ಮನವಿಯನ್ನು ಅರ್ಹತೆಯ ಮೇಲೆ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಹಾಗೂ ಎಂ.ಆರ್. ಶಾಹ್ ಅವರನ್ನೊಳಗೊಂಡ ಪೀಠ ಕೇಂದ್ರ ಸರಕಾರದ ಪರವಾಗಿ ಹಾಜರಾಗಿದ್ದ ನ್ಯಾಯವಾದಿಗೆ ತಿಳಿಸಿತು.
ಒಂದು ವೇಳೆ ನೀವು ಅವರನ್ನು ಬಿಡುಗಡೆ ಮಾಡುವುದಿದ್ದರೆ, ಬೇಗ ಬಿಡುಗಡೆ ಮಾಡಿ. ಇಲ್ಲದೆ ಇದ್ದರೆ ನಾವು ಅವರ ಸಹೋದರಿಯ ಮನವಿಯನ್ನು ಅರ್ಹತೆ ಆಧಾರದಲ್ಲಿ ವಿಚಾರಣೆ ನಡೆಸುತ್ತೇವೆ ಎಂದರು. ಈ ಪ್ರಕರಣದಲ್ಲಿ ಹಾಜರಾಗುತ್ತಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ಇನ್ನೊಂದು ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿದ್ದಾರೆ ಎಂದು ಕೇಂದ್ರ ಸರಕಾರ ಹಾಗೂ ಜಮ್ಮು ಕಾಶ್ಮೀರ ಆಡಳಿತದ ಪರ ನ್ಯಾಯವಾದಿ ಮಾಹಿತಿ ನೀಡಿದ ಬಳಿಕ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ದೂರುದಾರೆಯ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್, ಈ ಪ್ರಕರಣದ ವಿಚಾರಣೆಗೆ ನ್ಯಾಯಾಲಯ ಅಲ್ಪಾವಧಿಯ ದಿನಾಂಕವೊಂದನ್ನು ನಿಗದಿ ಮಾಡಬೇಕು ಎಂದು ಹೇಳಿದರು. ಕಳೆದ ವರ್ಷ ಆಗಸ್ಟ್ 5ರಂದು ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡುವ ವಿಧಿ 370ನ್ನು ರದ್ದುಗೊಳಿಸಿದ ಹಾಗೂ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಬಳಿಕ ಉಮರ್ ಅಬ್ದುಲ್ಲಾ ಅವರನ್ನು ಸಾರ್ವಜನಿಕ ಸುರಕ್ಷಾ ಕಾಯ್ದೆ ಅಡಿಯಲ್ಲಿ ಗೃಹ ಬಂಧನದಲ್ಲಿ ಇರಿಸಲಾಗಿತ್ತು.