ಕೊರೋನ ಹಾವಳಿ ನಡುವೆಯೂ ಅಯೋಧ್ಯೆಯಲ್ಲಿ ಮಹಾ ಮೇಳಕ್ಕೆ ಆದಿತ್ಯನಾಥ್ ಸರಕಾರ ಅಸ್ತು

Update: 2020-03-18 16:10 GMT

ಹೊಸದಿಲ್ಲಿ,ಮಾ.18: ದೇಶಾದ್ಯಂತ ತನ್ನ ಕಬಂಧಬಾಹುಗಳನ್ನು ಚಾಚುತ್ತಿರುವ ಕೊರೋನ ವೈರಸ್ ಸೋಂಕಿನ ತಡೆಗೆ ಹಲವಾರು ರಾಜ್ಯ ಸರಕಾರಗಳು ಶತಾಯಗತಾಯ ಪ್ರಯತ್ನಿಸುತ್ತಿರುವಂತೆಯೇ, ಉತ್ತರಪ್ರದೇಶದಲ್ಲಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರವು ರಾಮನವವಿಯ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಬೃಹತ್ ಸಮಾರಂಭವೊಂದನ್ನು ಆಯೋಜಿಸುವುದಕ್ಕೆ ಅನುಮೋದನೆ ನೀಡಿದೆ.

    ರಾಮನವಮಿ ಮೇಳವು ಮಾರ್ಚ್ 25ರಿಂದ ಎಪ್ರಿಲ್ 2ರವರೆಗೆ ನಡೆಯಲಿದ್ದು, ಲಕ್ಷಾಂತರ ಮಂದಿ ಭಕ್ತರನ್ನು ಆಕರ್ಷಿಸುವ ನಿರೀಕ್ಷೆಯಿದೆ. ಕೊರೋನ ವೈರಸ್ ಸೋಂಕು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಬೃಹತ್ ಸಭೆ,ಸಮಾರಂಭಗಳನ್ನು ಆಯೋಜಿಸದಂತೆ ತಜ್ಞರು ಎಚ್ಚರಿಕೆ ನೀಡಿದ ಹೊರತಾಗಿಯೂ ಆದಿತ್ಯನಾಥ್ ಸರಕಾರದ ಈ ಕ್ರಮವು ಅಚ್ಚರಿಯುಂಟು ಮಾಡಿದೆ.

   ಕೊರೋನ ಸೋಂಕಿನ ಹರಡುವ ಸಾಧ್ಯತೆಯಿರುವುದರಿಂದ ಈ ಬೃಹತ್ ಕಾರ್ಯಕ್ರಮವನ್ನು ರದ್ದುಪಡಿಸುವಂತೆ ಅಯೋಧ್ಯೆಯ ಮುಖ್ಯ ವೈದ್ಯಾಧಿಕಾರಿ ಘನಶ್ಯಾಮ್‌ಸಿಂಗ್ ಉ.ಪ್ರ. ಸರಕಾರಕ್ಕೆ ಮನವಿ ಮಾಡಿದ್ದಾರೆ. ಆ ಸಮಾರಂಭಕ್ಕೆ ಆಗಮಿಸುವ ಭಾರೀ ಜನಸಂಖ್ಯೆಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಲು ಬೇಕಾದ ಅಗತ್ಯ ಸಂಪನ್ಮೂಲಗಳು ನಮ್ಮಲ್ಲಿಲ್ಲ ಎಂದವರು ಹೇಳಿದ್ದಾರೆ.

ಆದರೆ ಅಯೋಧ್ಯೆಯ ರಾಮನವಮಿ ಕಾರ್ಯಕ್ರಮವನ್ನು ರದ್ದುಪಡಿಸಿದಲ್ಲಿ ಹಿಂದೂಗಳ ಆಕ್ರೋಶಕ್ಕೆ ತುತ್ತಾಗುವುದನ್ನು ತಪ್ಪಿಸಲು ಆದಿತ್ಯನಾಥ್ ಅವರು ಈ ಮೇಳವನ್ನು ನಡೆಸಲು ಅನುಮತಿ ನೀಡಿದ್ದಾರೆ ಎಂದು ಸರಕಾರದ ಮೂಲಗಳು ತಿಳಿಸಿವೆ.

   ಸರಕಾರವು ಮೇಳವನ್ನು ನಡೆಸುವುದಕ್ಕೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕೂಡಾ ತಮ್ಮ ನಿಲುವನ್ನು ಬದಲಾಯಿಸಿದ್ದಾರೆ. ಕೋವಿಡ್-19 ಹರಡುವುದನ್ನು ತಡೆಯಲು ಸರಕಾರವು ಅಗತ್ಯವಿರುವ ಎಲ್ಲಾ ಏರ್ಪಾಡುಗಳನ್ನು ಮಾಲಿದೆಯೆಂದು ಅವರ ಹೇಳಿದ್ದಾರೆ.

ರಾಮಮಂದಿರ ನಿರ್ಮಾಣ ಸಮಿತಿಯ ಸದಸ್ಯರೂ ಆಗಿರುವ ಅಯೋಧ್ಯೆ ಜಿಲ್ಲಾಧಿಕಾರಿ ಅನುಜ್ ಕುಮಾರ್ ಝಾ ಅವರು ಉ.ಪ್ರ. ಸರಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಕೊರೋನಾ ವೈರಸ್ ಸೋಂಕು ಹರಡದಂತೆ ತಡೆಯಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಅದರೆ ರಾಮನವಮಿ ಮೇಳಾವನ್ನು ರದ್ದುಪಡಿಸಲು ಯಾವುದೇ ಯೋಜನೆಯಿಲ್ಲವೆಂದು ಅವರು ಹೇಳಿದ್ದಾರೆ. ಈ ಸಮಾರಂಭಕ್ಕಾಗಿ ಜಿಲ್ಲಾಡಳಿತವು ಕಳೆದ ಒಂದು ತಿಂಗಳಿಂದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾ ಬಂದಿದೆ ಎಂದು ಜಿಲ್ಲಾಧಿಕಾರಿ ಝಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News