ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಯ ಗಡಿಪಾರು ನೋಟಿಸ್‌ಗೆ ತಡೆ
ಹೊಸದಿಲ್ಲಿ,ಮಾ.18: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ್ದಕ್ಕಾಗಿ ಪೋಲ್ಯಾಂಡ್‌ನ ವಿದ್ಯಾರ್ಥಿಗೆ ಭಾರತವನ್ನು ತೊರೆಯುವಂತೆ ಆದೇಶಿಸಿ ಹೊರಡಿಸಲಾದ ನೋಟಿಸನ್ನು ಕೋಲ್ಕತಾ ಹೈಕೋರ್ಟ್ ಬುಧವಾರ ಬದಿಗೊತ್ತಿದೆ.
ಜಾಧವ್‌ಪುರ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿರುವ ಪೊಲ್ಯಾಂಡ್ ವಿದ್ಯಾರ್ಥಿ ಕಾಮಿಲ್ ಸಿಡ್‌ಸ್ಜಿನ್‌ಸ್ಕಿ ಅವರಿಗೆ ದೇಶಬಿಟ್ಟು ಹೋಗುವಂತೆ ಸೂಚಿಸಿ ನೀಡಲಾದ ನೋಟಿಸ್‌ನ್ನು ಅನುಷ್ಠಾನಕ್ಕೆ ತಾರದಂತೆ ನ್ಯಾಯಮೂರ್ತಿ ಸಬ್ಯಸಾಚಿ ಭಟ್ಟಾಚಾರ್ಯ ಅವರು ಕೇಂದ್ರ ಸರಕಾರಕ್ಕೆ ನಿರ್ದೇಶಿಸಿದ್ದಾರೆ.
ತನ್ನನ್ನು ಭಾರತ ತೊರೆಯುವಂತೆ ಸೂಚಿಸಿ ನೀಡಲಾದ ನೋಟಿಸ್‌ನ್ನು ಪೊಲ್ಯಾಂಡ್ ವಿದ್ಯಾರ್ಥಿಯು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರಿಂದ ಅದು ಇತ್ಯರ್ಥ ವಾಗುವವರೆಗೂ ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದೆಂದು ಕೋಲ್ಕತಾ ಹೈಕೋರ್ಟ್ ಮಾ.6ರಂದು ನೀಡಿದ ಆದೇಶದಲ್ಲಿ ತಿಳಿಸಿತ್ತು.
ಸಿಡ್‌ಸ್ಜಿನ್‌ಸ್ಕಿ ಅವರು ಜಾಧವ್‌ಪುರ ವಿಶ್ವವಿದ್ಯಾನಿಲಯದಲ್ಲಿ ತುಲನಾತ್ಮಕ ಸಾಹಿತ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿಗಾಗಿ ನೋಂದಾಯಿಸಿಕೊಂಡಿದ್ದರು. ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಫೆಬ್ರವರಿ 14ರಂದು ಅವರಿಗೆ ದೇಶ ತೊರೆಯುವಂತೆ ವಿದೇಶಿಯರ ನೋಂದಣಿ ಕಚೇರಿಯಿಂದ ನೋಟಿಸ್ ನೀಡಲಾಗಿತ್ತು.