ಈಶಾನ್ಯ ರಾಜ್ಯಗಳ ವಿರುದ್ಧ ಜನಾಂಗೀಯ ಟೀಕೆಗಳಿಗೆ ಗರಂ ಆದ ಕಿರಣ್ ರಿಜಿಜು
ಹೊಸದಿಲ್ಲಿ,ಮಾ.18: ಚೀನಾದ ವುಹಾನ್ ಪ್ರಾಂತ್ಯದಿಂದ ಹೊರಬಿದ್ದು ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೋನವೈರಸ್‌ನಿಂದಾಗಿ ಈಶಾನ್ಯ ಭಾರತದ ಜನರು ಹೆಚ್ಚುವರಿ ಸಂಕಷ್ಟವನ್ನು ಅನುಭವಿಸುವಂತಾಗಿದೆ. ಚೀನಿಯರ ಹೋಲಿಕೆಗಳನ್ನು ಹೊಂದಿರುವ ಕಾರಣಕ್ಕಾಗಿ ಸ್ವದೇಶಿಯರಿಂದಲೇ ಜನಾಂಗೀಯ ಟೀಕೆಗಳನ್ನು ಅವರು ಕೇಳುವಂತಾಗಿದೆ. ಇಂತಹ ಘಟನೆಗಳ ವಿರುದ್ಧ ಗರಂ ಆಗಿರುವ ಕೇಂದ್ರ ಸಚಿವ ಕಿರಣ ರಿಜಿಜು ಅವರು ಈ ಬೆಳವಣಿಗೆಯನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿದ್ದಾರೆ. ಇದಕ್ಕೆ ಈಶಾನ್ಯ ರಾಜ್ಯಗಳ ಕುರಿತು ಸಾಂಸ್ಕೃತಿಕ ಅಜ್ಞಾನ,ಪೂರ್ವಗ್ರಹ ಮತ್ತು ತಿಳುವಳಿಕೆಯ ಕೊರತೆ ಕಾರಣ ಎಂದು ಸ್ವತಃ ಅರುಣಾಚಲ ಪ್ರದೇಶದವರಾಗಿರುವ ರಿಜಿಜು ಟ್ವಿಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗೃಹ ಸಚಿವಾಲಯದ ಈಶಾನ್ಯ ರಾಜ್ಯಗಳ ವಿಭಾಗದಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು, ಇಂತಹ ಜನಾಂಗೀಯ ಟೀಕೆಗಳನ್ನು ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶಗಳನ್ನು ಹೊರಡಿಸಲಾಗಿದೆ ಎಂದು ಅವರು ತಿಳಿಸಿದರು.
ಚೀನೀಯರ ಮುಖಸಾಮ್ಯತೆ ಹೊಂದಿರುವುದರಿಂದ ಈಶಾನ್ಯ ರಾಜ್ಯಗಳ ಜನರು ಆಗಾಗ್ಗೆ ಇತರ ಭಾರತೀಯರ ಟೀಕೆಗೆ ವಸ್ತುವಾಗುತ್ತಲೇ ಇದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳಂತೆ ಈಶಾನ್ಯ ಭಾರತದಲ್ಲಿ ಈವರೆಗೆೆ ಕೇವಲ ಒಂದು ದೃಢೀಕೃತ ಕೊರೋವೈರಸ್ ಸೋಂಕು ಪ್ರಕರಣ ಅರುಣಾಚಲ ಪ್ರದೇಶದಿಂದ ವರದಿಯಾಗಿದೆ. ವಿದೇಶಿಯರು ಮತ್ತು ಭಾರತದ ಇತರ ಸೋಂಕು ಪೀಡಿತ ರಾಜ್ಯಗಳ ಜನರಿಗೆ ಪ್ರವೇಶ ನಿಷೇಧ ಸೇರಿದಂತೆ ಹಲವಾರು ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಈ ರಾಜ್ಯಗಳು ತೆಗೆದುಕೊಂಡಿವೆ.