×
Ad

ಕೊರೊನಾ ಸೋಂಕಿಗೊಳಗಾದ ಕನಿಕಾ ಕಪೂರ್ ಭೇಟಿ: ವಸುಂಧರಾ ರಾಜೆ, ಪುತ್ರ ಸ್ವಯಂ ನಿರ್ಬಂಧದಲ್ಲಿ

Update: 2020-03-20 19:16 IST

 ಹೊಸದಿಲ್ಲಿ,ನ.22: ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಕರೋನಾ ವೈರಸ್ ಸೋಂಕು ತಗಲಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ ಬೆನ್ನಲ್ಲೇ, ಆಕೆ ಲಕ್ನೋದಲ್ಲಿ ಭೋಜನಕೂಟವೊಂದರಲ್ಲಿ ಪಾಲ್ಗೊಂಡಿರುವ ವಿಷಯ ಕೂಡಾ ಬೆಳಕಿಗೆ ಬಂದಿದ್ದು ಭಾರೀ ಆತಂಕ ಸೃಷ್ಟಿಸಿದೆ. ಬಿಜೆಪಿಯ ನಾಯಕಿ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಹಾಗೂ ಆಕೆಯ ಪುತ್ರ ದುಷ್ಯಂತ ಸಿಂಗ್ ಕೂಡಾ ಭೋಜನಕೂಟದಲ್ಲಿ ಭಾಗವಹಿಸಿದ್ದು, ಅವರೀಗ ಸ್ವಯಂ ದಿಗ್ಬಂಧನಕ್ಕೊಳಗಾಗಲು ನಿರ್ಧರಿಸಿದ್ದಾರೆ.

ವಸುಂಧರ ರಾಜೆ ಸಿಂಧ್ಯಾ ಶುಕ್ರವಾರ ಈ ಬಗ್ಗೆ ಟ್ವೀಟ್ ಮಾಡಿದ್ದು, ‘‘ ನಾನು ಲಕ್ನೋದಲ್ಲಿದ್ದಾಗ ನನ್ನ ಪುತ್ರ ದುಷ್ಯಂತ ಹಾಗೂ ಆತನ ಬೀಗರ ಜೊತೆಗೆ ನಾನು ಭೋಜನಕೂಟದಲ್ಲಿ ಭಾಗವಹಿಸಿದ್ದೆ. ದುರದೃಷ್ಟವಶಾತ್ ಕೊರೋನವೈರಸ್ ಸೋಂಕು ಪಾಸಿಟಿವ್ ಆಗಿರುವುದು ದೃಢಪಟ್ಟ ಕನಿಕಾ ಕಪೂರ್ ಕೂಡಾ ಅತಿಥಿಯಾಗಿ ಆಗಮಿಸಿದ್ದರು. ಅಪಾರವಾದ ಎಚ್ಚರಿಕೆಯ ಕ್ರಮವಾಗಿ, ನನ್ನ ಪುತ್ರ ಹಾಗೂ ನಾನು ತಕ್ಷಣವೇ ಸ್ವಯಂ ದಿಗ್ಬಂಧನಕ್ಕೊಳಗಾಗಿದ್ದೇವೆ ಹಾಗೂ ಎಲ್ಲಾ ರೀತಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ’’ ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರ ರಾಜೆ ಟ್ವೀಟಿಸಿದ್ದಾರೆ.

 ಸಂತೋಷಕೂಟವನ್ನು ತಾನು ಆಯೋಜಿಸಿದ್ದೆ ಎಂಬ ವರದಿಗಳನ್ನು 41 ವರ್ಷ ವಯಸ್ಸಿನ ಕನಿಕಾ ಕಪೂರ್ ನಿರಾಕರಿಸಿದ್ದಾರೆ. ಸಚಿವರು ಹಾಗೂ ಅಧಿಕಾರಿಗಳು ಸೇರಿದಂತೆ ಹಲವು ಪ್ರಮುಖ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ಕಾರ್ಯಕ್ರಮದಲ್ಲಿ ಸುಮಾರು 200 ಮಂದಿ ಉಪಸ್ಥಿತರಿದ್ದರೆಂದು ತಿಳಿದುಬಂದಿದೆ.

ಕನಿಕಾಕಪೂರ್ ಮಾರ್ಚ್ 9ರಂದು ಲಂಡನ್‌ನಿಂದ ಮುಂಬೈಗೆ ಆಗಮಿಸಿದ್ದರು ಹಾಗೂ ಎರಡು ದಿನಗಳ ಬಳಿಕ ಅವರು ಲಕ್ನೋಗೆ ತೆರಳಿದ್ದರು.

ಲಂಡನ್‌ನಿಂದ ಆಗಮಿಸಿದ ಬಳಿಕ ಮುಂಬೈ ವಿಮಾನನಿಲ್ದಾಣದಲ್ಲಿ ತಾನು ತಪಾಸಣೆಗೊಳಗಾಗಿದ್ದರೂ ತನಗೆ ಕೊರೋನಾ ವೈರಸ್‌ನ ಯಾವುದೇ ರೋಗಲಕ್ಷಣಗಳು ಪತ್ತೆಯಾಗಿರಲಿಲ್ಲವೆಂದು ಆಕೆ ಹೇಳಿದ್ದಾರೆ.

ಸಂಸತ್‌ಗೆ ಬೀಗಜಡಿಯಿರಿ: ಬ್ರಿಯಾನ್

ಕನಿಕಾ ಕಪೂರ್ ಉಪಸ್ಥಿತರಿದ್ದ ಸಂತೋಷಕೂಟದಲ್ಲಿ ಪಾಲ್ಗೊಂಡ ಬಳಿಕ, ಬಿಜೆಪಿ ಸಂಸದ ದುಷ್ಯಂತ ಸಿಂಗ್ ಲೋಕಸಭಾ ಕಲಾಪಕ್ಕೂ ಹಾಜರಾಗಿದ್ದರು. ಈ ಬಗ್ಗೆ ತೃಣಮೂಲ ಕಾಂಗ್ರೆಸ್ ಸದಸ್ಯ ಡೆರೆಕ್ ಓ ಬ್ರಿಯಾನ್ ಕಟುವಾಗಿ ಪ್ರತಿಕ್ರಿಯಿಸಿದ್ದು ಕೋವಿಡ್-19 ಹಿನ್ನೆಲೆಯಲ್ಲಿ ಸಂತ್‌ಗೆ ಪೂರ್ಣವಾಗಿ ಬೀಗಜಡಿಯಬೇಕೆಂದು ಆಗ್ರಹಿಸಿದ್ದಾರೆ.

 ‘‘ ಈ ಸರಕಾರವು ನಮ್ಮನ್ನೆಲ್ಲಾ ಅಪಾಯಕ್ಕೊಡ್ಡಿದೆ. ನೀವಾಗಿಯೇ ಏಕಾಂತದಲ್ಲಿರಿ ಎಂದು ಪ್ರಧಾನಿ ಹೇಳುತ್ತಾರೆ. ಆದರೆ ಸಂಸತ್ ನಡೆಯುತ್ತಲೇ ಇದೆ. ಮರು ದಿನ ನಾನು ದುಷ್ಯಂತರ ಸಮೀಪ ಸುಮಾರು 2:50 ತಾಸು ಕಾಲ ಕುಳಿತುಕೊಂಡಿದ್ದೆ. ಇನ್ನೂ ಇಬ್ಬರು ಸಂಸದರು ಸ್ವಯಂ ದಿಗ್ಬಂಧನದಲ್ಲಿದ್ದಾರೆ. ಈ ಅಧಿವೇಶನವನ್ನು ಮುಂದೂಡಬೇಕಾಗಿದೆ’’ ಎಂದು ಓ ಬ್ರಿಯಾನ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News