ಜಾಮೀನು ದೊರೆತ ಎರಡೇ ದಿನಗಳಲ್ಲಿ ಮತ್ತೆ ಅಖಿಲ್ ಗೊಗೊಯಿ ಬಂಧನ

Update: 2020-03-20 15:08 GMT
ಫೈಲ್ ಚಿತ್ರ

ಗುವಾಹಟಿ,ಮಾ.20: ರಾಜ್ಯದಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳಲ್ಲಿ ಭಾಗಿಯಾಗಿ ಬಂಧಿಸಲ್ಪಟ್ಟು ಎರಡು ದಿನಗಳ ಹಿಂದಷ್ಟೇ ವಿಶೇಷ ಎನ್‌ಐಎ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲ್ಪಟ್ಟಿದ್ದ ಅಸ್ಸಾಮಿನ ಹೋರಾಟಗಾರ ಅಖಿಲ್ ಗೊಗೊಯಿ ಅವರನ್ನು ಮತ್ತೆ ಬಂಧಿಸಲಾಗಿದೆ.

ಗುರುವಾರ ನಸುಕಿನ ಐದು ಗಂಟೆಯ ಸುಮಾರಿಗೆ ಗುವಾಹಟಿ ಸೆಂಟ್ರಲ್ ಜೈಲಿನಲ್ಲಿ ತನ್ನ ಕಕ್ಷಿದಾರರನ್ನು ಬಂಧಿಸಿದ ಶಿವಸಾಗರದ ಪೊಲೀಸರು ಅವರನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ ಎಂದು ಗೊಗೊಯಿಯವರ ವಕೀಲ ಶಂತನು ಬೋರ್ಥಾಕೂರ್ ಸುದ್ದಿಗಾರರಿಗೆ ತಿಳಿಸಿದರು.

ಗೊಗೊಯಿ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ, ಆದರೆ ಈಗಲೂ ತನ್ನ ಬಳಿ ಎಲ್ಲ ವಿವರಗಳಿಲ್ಲ ಎಂದ ಅವರು,ಶಿವಸಾಗರ ಪೊಲೀಸರು ಗೊಗೊಯಿ ವಿರುದ್ಧ ಜಾಮೀನು ಲಭ್ಯವಿಲ್ಲದ ಐಪಿಸಿ ಕಲಮ್‌ನಡಿ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದರು ಎಂದರು.

ಗೊಗೊಯಿ ಕೃಷಿಕ ಮುಕ್ತಿ ಸಂಗ್ರಾಮ ಸಮಿತಿಯ ಸ್ಥಾಪಕರಾಗಿದ್ದಾರೆ. ಪೊಲೀಸರು ಕಳೆದ ಮೂರು ದಿನಗಳಿಂದ ಗುವಾಹಟಿಯಲ್ಲಿದ್ದರು ಮತ್ತು ಗೊಗೊಯಿ ಬಂಧನಕ್ಕಾಗಿ ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದ್ದರು ಎಂದು ಸಮಿತಿಯ ಜಂಟಿ ಕಾರ್ಯದರ್ಶಿ ಮುಕುತ್ ಡೇಕಾ ತಿಳಿಸಿದರು.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಜೋರ್ಹಾಟ್ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ನಡೆದಿದ್ದ ಸಿಎಎ ವಿರೋಧಿ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ಗೊಗೊಯಿ ಅವರನ್ನು ಪೊಲೀಸರು ಬಂಧಿಸಿದ್ದರು. ದೇಶದ ವಿರುದ್ಧ ಸಮರ ಸಾರಿದ್ದ,ಒಳಸಂಚು ಮತ್ತು ದಂಗೆಗಳ ಆರೋಪದಲ್ಲಿ ಗೊಗೊಯಿವರನ್ನು ಬಂಧಿಸಲಾಗಿದೆ ಎಂದು ಎನ್‌ಐಎ ತಿಳಿಸಿತ್ತು. ಮೂರು ದಿನಗಳ ಬಳಿಕ ಅವರ ವಿರುದ್ಧ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯನ್ನು ಹೇರಲಾಗಿತ್ತು. ನಿಗದಿತ 90 ದಿನಗಳ ಅವಧಿಯೊಳಗೆ ಆರೋಪ ಪಟ್ಟಿಯನ್ನು ಸಲ್ಲಿಸಲು ಎನ್‌ಐಎ ವಿಫಲಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News