ಅಸ್ಸಾಂ: ಕೊರೋನವೈರಸ್ ಭೀತಿಯಿಂದ ಎನ್‌ಆರ್‌ಸಿ ನಿರಾಕರಣೆ ಚೀಟಿ ನೀಡಿಕೆ ಸ್ಥಗಿತ

Update: 2020-03-20 15:10 GMT

ಗುವಾಹಟಿ,ಮಾ.20: ಅಸ್ಸಾಮಿನಲ್ಲಿ ಅಂತಿಮ ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದಿರುವ 19 ಲಕ್ಷಕ್ಕೂ ಅಧಿಕ ಜನರು ಈಗ ಕೊರೋನವೈರಸ್ ಪಿಡುಗಿನಿಂದಾಗಿ ನಿರಾಕರಣೆ ಚೀಟಿಗಳನ್ನು ಪಡೆಯಲೂ ಸಾಧ್ಯವಾಗುತ್ತಿಲ್ಲ.

ನಾವೀಗ ಚೀಟಿ ವಿತರಣೆಯನ್ನು ಆರಂಭಿಸಿದರೆ ಜನರು ಎನ್‌ಆರ್‌ಸಿ ನಾಗರಿಕ ಸೇವಾ ಕೇಂದ್ರಗಳನ್ನು ಸೇರತೊಡಗುತ್ತಾರೆ ಮತ್ತು ಕೊರೋನವೈರಸ್ ಸೋಂಕಿನ ಹಿನ್ನಲೆಯಲ್ಲಿ ಇದಕ್ಕೆ ಅವಕಾಶ ನೀಡುವಂತಿಲ್ಲ ಎಂದು ಎನ್‌ಆರ್‌ಸಿಯ ರಾಜ್ಯ ಮುಖ್ಯಸ್ಥ ಹಿತೇಶ ದೇವ ಶರ್ಮಾ ಅವರು ತಿಳಿಸಿದರು.

ಕಳೆದ ವರ್ಷದ ಆ.31ರಂದು ಅಂತಿಮ ಎನ್‌ಆರ್‌ಸಿ ಪಟ್ಟಿ ಪ್ರಕಟಗೊಂಡಾಗಿನಿಂದಲೂ ನಿರಾಕರಣೆ ಚೀಟಿಗಳಿಗಾಗಿ ಕಾಯುತ್ತಿರುವ 19 ಲಕ್ಷಕ್ಕೂ ಅಧಿಕ ಜನರ ಭವಿಷ್ಯ ಅನಿಶ್ಚಿತತೆಯಲ್ಲಿದೆ. ಈ ಚೀಟಿಗಳ ಆಧಾರದಲ್ಲೇ ಅವರು ವಿದೇಶಿಯರ ನ್ಯಾಯಾಧಿಕರಣ (ಎಫ್‌ಟಿ)ಗಳಿಗೆ ಮೇಲ್ಮನವಿಗಳನ್ನು ಸಲ್ಲಿಸಬೇಕಿದೆ. ಅವರನ್ನು ಎನ್‌ಆರ್‌ಸಿ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಕಾರಣ ಈ ಚೀಟಿಗಳಲ್ಲಿ ಉಲ್ಲೇಖಗೊಂಡಿರುತ್ತದೆ.

ನಿರಾಕರಣೆ ಚೀಟಿಗಳ ವಿತರಣೆಗೆ ಯಾವುದೇ ದಿನಾಂಕವನ್ನು ಎನ್‌ಆರ್‌ಸಿ ಕಚೇರಿಯು ಪ್ರಕಟಿಸಿರಲಿಲ್ಲ. ಆದರೆ ಮಾ.20ರಿಂದ ಚೀಟಿಗಳ ವಿತರಣೆ ಆರಂಭಗೊಳ್ಳಲಿದೆ ಎಂದು ರಾಜ್ಯದ ಸಚಿವ ಚಂದ್ರಮೋಹನ ಪಟವಾರಿ ಅವರು ಇತ್ತೀಚಿಗೆ ವಿಧಾನಸಭೆಯಲ್ಲಿ ತಿಳಿಸಿದ್ದರು.

ಕೆಲಸವು ಹೆಚ್ಚುಕಡಿಮೆ ಪೂರ್ಣಗೊಂಡಿದೆ. ಕೊರೋನವೈರಸ್ ಪಿಡುಗು ಇಲ್ಲದಿದ್ದರೆ ಚೀಟಿ ವಿತರಣೆ ಕಾರ್ಯ ಆರಂಭವಾಗಿರುತ್ತಿತ್ತು. ಹೊಸ ದಿನಾಂಕವನ್ನು ಪ್ರಕಟಿಸಲು ನಾವು ಇನ್ನೂ 15ದಿನ ಕಾಯಬೇಕಾಗಬಹುದು ಎಂದು ಪಟವಾರಿ ಈ ಕುರಿತು ಪ್ರಶ್ನಿಸಿದ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News