×
Ad

ಭಾರತದಲ್ಲಿ 206 ಮಂದಿಗೆ ಕೊರೊನಾ ಸೋಂಕು ದೃಢ

Update: 2020-03-20 20:47 IST

ಹೊಸದಿಲ್ಲಿ,ಮಾ.20: ಭಾರತದಾದ್ಯಂತ ಕೊರೋನ ವೈರಸ್ ಭಯಾನಕವಾಗಿ ಹರಡುತ್ತಿದ್ದು, ಈವರೆಗೆ ದೇಶದಲ್ಲಿ 206 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಶುಕ್ರವಾರ ತಿಳಿಸಿದೆ.

ಸೋಂಕಿತರ ಈ ಸಂಖ್ಯೆಯು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿದ ಅಂಕಿಅಂಶಗಳಿಗಿಂತ 11ರಷ್ಟು ಅಧಿಕವಾಗಿದೆ. ಪಶ್ಚಿಮ ಬಂಗಾಳ, ಒಡಿಶಾ, ಉತ್ತರಪ್ರದೇಶ, ತೆಲಂಗಾಣ, ಪಂಜಾಬ್, ಗುಜರಾತ್ ಹಾಗೂ ಆಂಧ್ರಪ್ರದೇಶಗಳಲ್ಲಿ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ.

 ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ, ಶುಕ್ರವಾರ ಬೆಳಗ್ಗೆ 10 ಗಂಟೆಯವರೆಗೆ ದೇಶಾದ್ಯಂತ 13,486 ಮಂದಿ ಯಿಂದ ಸಂಗ್ರಹಿಸಲಾದ ಮಾದರಿ(ಸ್ಯಾಂಪಲ್)ಗಳಿಂದ ಕೋವಿಡ್-19 ವೈರಸ್ ತಪಾಸಣೆಯನ್ನು ಮಾಡಲಾಗಿದೆ. ಇವರ ಪೈಕಿ 206 ಮಂದಿಯಲ್ಲಿ ಕೊರೋನ ವೈರಸ್ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ ಎಂದು ಐಸಿಎಂಆರ್ ತಿಳಿಸಿದೆ.

ಆರೋಗ್ಯ ಇಲಾಖೆಯು ಪಟ್ಟಿ ಮಾಡಿದ 195 ಸೋಂಕು ಪ್ರಕರಣಗಳಲ್ಲಿ 32 ವಿದೇಶಿಯರು ಕೂಡಾ ಇದ್ದಾರೆ. ದಿಲ್ಲಿ,ಕರ್ನಾಟಕ, ಪಂಜಾಬ್ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ತಲಾ ಓರ್ವ ಈ ಸೋಂಕಿನಿಂದ ಮೃತಪಟ್ಟಿದ್ದಾರೆ. ಇಟಲಿಯಿಂದ ಆಗಮಿಸಿದ ಕೊರೋನಾ ಸೋಂಕಿತನೊಬ್ಬ ಕೂಡಾ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಈವರೆಗೆ ಕೊರೋನಾ ವೈರಸ್ ಸೋಂಕು ತಗಲಿದ 20 ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

  ಭಾರತದಲ್ಲಿ ಕೊರೋನ ಸೋಂಕು ದೃಢಪಟ್ಟ 32 ಮಂದಿ ವಿದೇಶಿಯರ ಪೈಕಿ 17 ಮಂದಿ ಇಟಲಿ, ಮೂವರು ಫಿಲಿಪ್ಫೀನ್ಸ್ ಹಾಗೂ ಇಬ್ಬರು ಬ್ರಿಟನ್ ದೇಶದ ಪ್ರಜೆಗಳಾಗಿದ್ದಾರೆ. ಕೆನಡಾ, ಇಂಡೋನೇಶ್ಯ ಹಾಗೂ ಸಿಂಗಾಪುರದ ತಲಾ ಓರ್ವ ಪ್ರಜೆಯಲ್ಲಿ ಕೊರೋನಾ ಪಾಸಿಟಿವ್ ಬಂದಿದೆ.

 ಮಹಾರಾಷ್ಟ್ರದಲ್ಲಿ ಕನಿಷ್ಠ 47 ಮಂದಿ ಕೊರೋನಾ ಸೋಂಕು ಬಾಧಿತರಾಗಿದ್ದು, ಇದು ದೇಶದಲ್ಲೇ ಅತ್ಯಂತ ಗರಿಷ್ಠವಾಗಿದೆ. ಇವರ ಪೈಕಿ ಮೂವರು ವಿದೇಶಿಯರು. ಕೇರಳದಲ್ಲಿ ಇಬ್ಬರು ವಿದೇಶಿಯರು ಸೇರಿದಂತೆ 28 ಮಂದಿಗೆ ಪಾಸಿಟಿವ್ ಬಂದಿದೆ.

  ಈ ಮಧ್ಯೆ ದಿಲ್ಲಿ ಹಾಗೂ ಹರ್ಯಾಣಗಳಲ್ಲಿ ತಲಾ 17 ಪಾಸಿಟಿವ್ ಪ್ರಕರಣಗಳು ವರದಿಯಾಗಿರುವುದಾಗಿ ಸಚಿವಾಲಯ ತಿಳಿಸಿದೆ. ಉತ್ತರಪ್ರದೇಶದಲ್ಲಿ 19 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಕರ್ನಾಟಕದಲ್ಲಿ ಈವರೆಗೆ 15 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ತೆಲಂಗಾಣದಲ್ಲಿ ಈವರೆಗೆ 16 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರಲ್ಲಿ 9 ಮಂದಿ ವಿದೇಶಿಯರು.

    ಈ ಮಧ್ಯೆ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿಯೂ ಕೊರೋನ ವೈರಸ್ ಬಾಧಿತರ ಸಂಖ್ಯೆ 10ಕ್ಕೇರಿದೆ. ಸಮೀಪದ ಕೇಂದ್ರಾಡಳಿತ ಪ್ರದೇಶದ ಜಮ್ಮುಕಾಶ್ಮೀರದಲ್ಲಿ ಸೋಂಕಿನ ನಾಲ್ಕು ಪ್ರಕರಣಗಳು ದೃಢಪಟ್ಟಿವೆ. ರಾಜಸ್ಥಾನದಲ್ಲಿ ಏಳು ಮಂದಿಯಲ್ಲಿ ರೋಗ ದೃಢಪಟ್ಟಿದ್ದು, ಅವರಲ್ಲೊಬ್ಬರು ವಿದೇಶಿಗ. ತಮಿಳುನಾಡಿನಲ್ಲಿ ಈವರೆಗೆ ಮೂರು ಹಾಗೂ ಆಂಧ್ರದಲ್ಲಿ ಎರಡು ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News