'ಮನುಷ್ಯನಿಲ್ಲದ ನಗರಗಳಲ್ಲಿ ಪ್ರಾಣಿಗಳ ಓಡಾಟ': ಕೊರೋನಾವೈರಸ್ ಜೊತೆ ಹಬ್ಬುತ್ತಿದೆ ಸುಳ್ಳು ಸುದ್ದಿಗಳು!

Update: 2020-03-21 13:54 GMT

ಈ ವಾರವೆಲ್ಲ ಸಾಮಾಜಿಕ ಜಾಲತಾಣದಲ್ಲಿ ಕೊರೋನಾವೈರಸ್ ಸೋಂಕು, ನಿರ್ಬಂಧದ ಆದೇಶಗಳು ಮತ್ತು ವೈದ್ಯಕೀಯ ಸೇವೆಗಳ ಕೊರತೆಗಳ ಸುದ್ದಿಗಳು ಹರಿದಾಡುತ್ತಿದ್ದವು. ಈ ನಡುವೆ ಕೆಲವು ವಿಚಿತ್ರ ಸುದ್ದಿಗಳೂ ಹರಿದಾಡಿದವು. "ಬಿಕೋ ಎನ್ನುತ್ತಿರುವ ಇಟಲಿಯ ವೆನಿಸ್‌ ನ ನಾಲೆಗಳಲ್ಲಿ ಮತ್ತೆ ಹಂಸಗಳು ಮರಳಿವೆ. ಜೊತೆಗೆ ಡಾಲ್ಫಿನ್‌ ಗಳೂ ಆಟವಾಡಿಕೊಂಡಿವೆ. ಚೀನಾದ ಯುನಾನ್ ಪ್ರಾಂತ್ಯದ ಗ್ರಾಮವೊಂದಕ್ಕೆ ಲಗ್ಗೆ ಇಟ್ಟ ಆನೆಗಳ ಗುಂಪೊಂದು ಕಾರ್ನ್ ವೈನ್‌ನ್ನು ಸೇವಿಸಿ ಚಹಾ ತೋಟವೊಂದರಿಂದ ಹಾದು ಹೋಗಿವೆ. ಕೊರೊನಾವೈರಸ್ ನಿಂದ ಮಾನವ ಸ್ತಬ್ಧನಾಗಿದ್ದು ಪ್ರಕೃತಿ ಆತನಿಗೆ ಪಾಠ ಕಲಿಸಿದೆ, ಪ್ರಾಣಿಗಳು ಸ್ವಚ್ಛಂದವಾಗಿ ತಿರುಗಾಡುತ್ತಿವೆ"..... ಇಂತಹ ಹಲವು ಸುದ್ದಿಗಳು ಹರಿದಾಡಿದವು.

ಕೊರೋನಾವೈರಸ್‌ ನಿಂದ ತೀವ್ರ ಬಾಧಿತ ದೇಶಗಳಲ್ಲಿ ವನ್ಯಜೀವಿಗಳು ಸ್ವಚ್ಛಂದವಾಗಿ ಅಲೆದಾಡುತ್ತಿರುವ ಕುರಿತ ಸುದ್ದಿಗಳು ಸಾವಿರಾರು ರಿಟ್ವೀಟ್‌ ಗಳನ್ನು ಪಡೆದಿದ್ದವು. ಇನ್‌ ಸ್ಟಾಗ್ರಾಂ ಮತ್ತು ಟಿಕ್‌ ಟಾಕ್‌ ಗಳಲ್ಲಿ ಇವು ವೈರಲ್ ಆಗಿದ್ದವು. ವೃತ್ತಪತ್ರಿಕೆಗಳಲ್ಲಿಯೂ ಪ್ರಮುಖ ಸುದ್ದಿಗಳಾಗಿ ಗಮನ ಸೆಳೆದಿವೆ. ಮಾನವರಹಿತ ಜಗತ್ತಿಗೆ ವನ್ಯಜೀವಿಗಳು ಮತ್ತೆ ಮರಳಿವೆ, ಅವು ಸ್ವಚ್ಛಂದವಾಗಿ ತಿರುಗಾಡುತ್ತಿವೆ, ಮಾನವನ ಕಾಟವಿಲ್ಲದೆ ಖುಷಿಯಾಗಿ ವಿಹರಿಸುತ್ತಿವೆ ಎಂದು ಹಲವರು ಈ ಸುದ್ದಿಗಳನ್ನು ಟ್ವೀಟ್ ಮಾಡಿ ಹೇಳಿದ್ದರು.

ವಾಸ್ತವವೇನು?

ವೈರಲ್ ಆಗಿರುವ ಪೋಸ್ಟ್‌ ಗಳಲ್ಲಿಯ ಹಂಸಗಳು ವೆನಿಸ್ ಮಹಾನಗರದಲ್ಲಿಯ ಪುಟ್ಟ ದ್ವೀಪ ಬುರಾನೊದ ನಾಲೆಗಳಲ್ಲಿ ಯಾವಾಗಲೂ ಕಂಡುಬರುತ್ತವೆ ಮತ್ತು ವೈರಲ್ ಆಗಿರುವ ಚಿತ್ರಗಳನ್ನು ಇವೇ ನಾಲೆಗಳಲ್ಲಿ ತೆಗೆಯಲಾಗಿತ್ತು. ವೆನಿಸ್‌ ನಲ್ಲಿ ಕಂಡು ಬಂದಿವೆ ಎಂದು ಹೇಳಲಾದ ಡಾಲ್ಫಿನ್‌ ಗಳ ಚಿತ್ರಗಳು ನೂರಾರು ಮೈಲುಗಳಷ್ಟು ದೂರದ ಮೆಡಿಟರೇನಿಯನ್ ಸಮುದ್ರದ ಸಾರ್ಡಿನಿಯಾದ ಬಂದರು ಬಳಿ ಕ್ಯಾಮರಾ ಸೆರೆ ಹಿಡಿದ ದೃಶ್ಯಗಳಾಗಿವೆ. ಕುಡುಕ ಆನೆಗಳ ಫೋಟೊಗಳು ಎಲ್ಲಿಂದ ಬಂದವು ಎನ್ನುವುದನ್ನು ಯಾರೂ ಹೇಳಿಲ್ಲ. ಆದರೆ ಚೀನಾದ ಮಾಧ್ಯಮ ವರದಿಯೊಂದು ಈ ವೈರಲ್ ಪೋಸ್ಟ್‌ ಗಳನ್ನು ಅಲ್ಲಗಳೆದಿದೆ. ಇತ್ತೀಚಿಗೆ ಯುನಾನ್‌ ನ ಗ್ರಾಮವೊಂದಕ್ಕೆ ಆನೆಗಳು ಬಂದಿದ್ದವಾದರೂ ಇಲ್ಲೆಲ್ಲ ಆನೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ ವಿದ್ಯಮಾನವಾಗಿದೆ ಮತ್ತು ಇವು ವೈರಲ್ ಆಗಿರುವ ಚಿತ್ರದಲ್ಲಿರುವ ಆನೆಗಳಂತೂ ಅಲ್ಲ. ಅವು ಮದ್ಯವನ್ನೂ ಕುಡಿದಿರಲಿಲ್ಲ ಮತ್ತು ಚಹಾತೋಟದ ಮೂಲಕ ಹಾದು ಹೋಗಿಯೂ ಇರಲಿಲ್ಲ ಎಂದು ವರದಿಯು ಸ್ಪಷ್ಟಪಡಿಸಿದೆ. ಅಲ್ಲಿಗೆ ಸಾಮಾಜಿಕ ಮಾಧ್ಯಮಗಳಲ್ಲಿನ ಈ ಕಥೆಗಳೆಲ್ಲ ಠುಸ್ ಆಗಿವೆ.

ಇದು ಬಿಕ್ಕಟ್ಟಿನ ಸಮಯದಲ್ಲಿಯೂ ಸುಳ್ಳು ಸುದ್ದಿಗಳು ಎಷ್ಟು ಬೇಗ ನಮ್ಮ ಕಣ್ಣಿಗೆ ಬೀಳುತ್ತವೆ ಮತ್ತು ಎಷ್ಟು ಬೇಗ ಹರಡುತ್ತವೆ ಎನ್ನುವುದನ್ನು ಬೆಟ್ಟು ಮಾಡುತ್ತಿದೆ. ಜನರು ತಮ್ಮನ್ನು ಭಾವನಾತ್ಮಕಗೊಳಿಸುವ ಪೋಸ್ಟ್‌ ಗಳನ್ನು ಶೇರ್ ಮಾಡುವ ಅನಿವಾರ್ಯತೆಯಲ್ಲಿದ್ದಾರೆ. ಸಾಮಾಜಿಕ ವಿದ್ಯಮಾನಗಳ ಹರಡುವಿಕೆಯು ಎಷ್ಟೊಂದು ಪ್ರಭಾವಶಾಲಿಯೆಂದರೆ ಅದು ಸಾಂಕ್ರಾಮಿಕ ಪಿಡುಗುಗಳು ಹರಡುವ ರೀತಿಯ ಜಾಡಿನಲ್ಲಿಯೇ ಸಾಗುತ್ತದೆ ಎಂದು 2016ರಲ್ಲಿ ನಡೆಸಲಾದ ಸಂಶೋಧನೆಯೊಂದು ಬೆಳಕಿಗೆ ತಂದಿದೆ.

ಸುಳ್ಳುಗಳು ವೈರಲ್ ಆದಾಗ...

ವೆನಿಸ್‌ ನ ನಾಲೆಗಳಿಗೆ ‘ಮರಳಿದ’ ಹಂಸಗಳ ಕುರಿತು ಕಾವೇರಿ ಗಣಪತಿ ಅಹುಜಾ ಎಂಬವರ ವಿವಾದಾತ್ಮಕ ಟ್ವೀಟ್‌ ಗೆ ಒಂದು ಮಿಲಿಯನ್ ಲೈಕ್‌ ಗಳು ಬಂದಿವೆ.

"ಕೊರೋನಾವೈರಸ್ ಸಾಂಕ್ರಾಮಿಕದ ಅನಿರೀಕ್ಷಿತ ಅಡ್ಡಪರಿಣಾಮವೊಂದು ಇಲ್ಲಿದೆ. ವೆನಿಸ್‌ ನ ನಾಲೆಗಳಲ್ಲಿ ಹರಿಯುತ್ತಿರುವ ನೀರು ಇದೇ ಮೊದಲ ಬಾರಿಗೆ ಸ್ಫಟಿಕ ಸ್ವಚ್ಛವಾಗಿದೆ. ಮೀನುಗಳು ಕಂಡು ಬರುತ್ತಿವೆ. ಹಂಸಗಳು ಮರಳಿವೆ" ಇದು ಅಹುಜಾ ಮಾಡಿದ್ದ ಟ್ವೀಟ್.

ದಿಲ್ಲಿಯ ನಿವಾಸಿಯಾಗಿರುವ ಅಹುಜಾ,ತಾನು ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೆ ಮತ್ತು ಅವುಗಳನ್ನೆಲ್ಲ ಸೇರಿಸಿ ಟ್ವೀಟಿಸಲು ನಿರ್ಧರಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಕೊರೋನವೈರಸ್ ಪಿಡುಗು ಇಟಲಿಯನ್ನು ಆವರಿಸುವ ಮೊದಲೇ ವೆನಿಸ್‌ ನ ಬುರಾನೋದಲ್ಲಿನ ನಾಲೆಗಳಲ್ಲಿ ಹಂಸಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದವು ಎನ್ನುವ ವಿಷಯ ಅವರಿಗೆ ಗೊತ್ತಿರಲಿಲ್ಲ.

‘ಈ ಹತಾಶ ದಿನಗಳಲ್ಲಿ ನನಗೆ ಸಂತಸವನ್ನುಂಟು ಮಾಡಿದ್ದ ವಿಷಯವನ್ನು ಶೇರ್ ಮಾಡಿಕೊಳ್ಳುವುದೊಂದೇ ನನ್ನ ಟ್ವೀಟ್‌ನ ಉದ್ದೇಶವಾಗಿತ್ತು. ಅದು ಇಷ್ಟೊಂದು ವೈರಲ್ ಆಗುತ್ತದೆ ಅಥವಾ ಯಾವುದೇ ಹಾನಿಯನ್ನು ಮಾಡುತ್ತದೆ ಎಂದು ನಾನೆಂದೂ ನಿರೀಕ್ಷಿಸಿರಲಿಲ್ಲ" ಎಂದು ಅಹುಜಾ ಹೇಳಿದ್ದಾರೆ.

ಆದಾಗ್ಯೂ ತನ್ನ ಟ್ವೀಟ್‌ ನ್ನು ಅಹುಜಾ ಅಳಿಸಿಲ್ಲ ಮತ್ತು ಆ ಉದ್ದೇಶವೂ ಅವರಿಗಿಲ್ಲ. ಅದು ಈಗಲೂ ಪ್ರಸ್ತುತವಾಗಿದೆ.

ತನ್ನ ಟ್ವೀಟ್‌ಗೆ ಬಂದಿರುವ ಅಭೂತಪೂರ್ವ ಸಂಖ್ಯೆಯ ಲೈಕ್‌ಗಳು ಮತ್ತು ರಿಟ್ವೀಟ್‌ಗಳ ಕುರಿತು ಟ್ವೀಟಿಸಿರುವ ಅಹುಜಾ,ಇದು ತನ್ನ ಪಾಲಿಗೆ ವೈಯಕ್ತಿಕ ದಾಖಲೆಯಾಗಿದೆ ಮತ್ತು ಅದನ್ನು ಅಳಿಸಲು ತಾನು ಬಯಸುತ್ತಿಲ್ಲ ಎಂದು ಟ್ವೀಟಿಸಿದ್ದಾರೆ.

ಪೋಸ್ಟಿಂಗ್‌ನ ಸೆಳೆತ

ವೆಬ್ ಡೆವಲಪರ್ ಮತ್ತು ಇಮೇಜ್ ವೆರಿಫಿಕೇಷನ್ ತಜ್ಞರಾಗಿರುವ ಪೌಲೊ ಒರ್ದೊವೆಝಾ ಅವರು ಹೆಸರಿನ @picpedant ಟ್ವಿಟರ್ ಖಾತೆಯನ್ನು ಹೊಂದಿದ್ದು, ಅದರಲ್ಲಿ ಅವರು ಸುಳ್ಳು ವೈರಲ್ ಪೋಸ್ಟ್‌ಗಳ ಬಣ್ಣವನ್ನು ಬಯಲು ಮಾಡುತ್ತಿರುತ್ತಾರೆ. ಅವರು ಹೇಳುವಂತೆ ವೈರಲ್ ಆಗುವ ದುರಾಸೆಯು ತಪ್ಪು ಮಾಹಿತಿಗಳನ್ನು ಹರಡುವಂತೆ ಪ್ರಚೋದಿಸುತ್ತದೆ. ಇದು ಲೈಕ್‌ ಗಳು ಮತ್ತು ರಿಟ್ವೀಟ್‌ ಗಳು ಸಾವಿರಾರು ಸಂಖ್ಯೆಯಲ್ಲಿ ಹೆಚ್ಚುವುದನ್ನು ನೋಡುವ ಅತಿರೇಕದ ಉತ್ಸಾಹವಾಗಿದೆ.

ಬಹಳಷ್ಟು ಲೈಕ್‌ ಗಳು ಮತ್ತು ಕಮೆಂಟ್‌ ಗಳನ್ನು ಪಡೆಯುವುದು ನಮಗೆ ದಿಢೀರ್ ಸಂತಸ ನೀಡುತ್ತದೆ ಎನ್ನುತ್ತಾರೆ ಸಾಮಾಜಿಕ ಮನಃಶಾಸ್ತ್ರಜ್ಞೆ ಮತ್ತು ಸ್ಟಾನ್‌ಫೋರ್ಡ್ ವಿವಿಯಲ್ಲಿ ಪೋಸ್ಟ್ ಡಾಕ್ಟರಲ್ ಫೆಲೊ ಆಗಿರುವ ಎರಿನ್ ವೊಜೆಲ್. ಇಂತಹ ಲೈಕ್‌ ಗಳು ಮತ್ತು ಕಮೆಂಟ್‌ ಗಳು ನಮಗೆ ಖುಷಿಯನ್ನು ನೀಡುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿಯ ಪೋಸ್ಟಿಂಗ್‌ ಗಳು ನಮ್ಮ ಆತ್ಮಗೌರವಕ್ಕೆ ತಾತ್ಕಾಲಿಕ ಉತ್ತೇಜನವನ್ನು ನೀಡುತ್ತವೆ ಎನ್ನುವುದನ್ನು ಅಧ್ಯಯನಗಳು ಬೆಳಕಿಗೆ ತಂದಿವೆ ಎನ್ನುತ್ತಾರೆ ಅವರು.

ಈ ಹಿಂದೆ ಉಲ್ಲೇಖಿಸಿದ ವನ್ಯಜೀವಿಗಳ ಚಿತ್ರಗಳು ಹಲವಾರು ವೈರಲ್ ಟ್ವೀಟ್‌ಗಳ ಮುಖ್ಯ ಧಾಟಿಗಳಾಗಿವೆ. ವೆನಿಸ್‌ನ ನಾಲೆಗಳಲ್ಲಿ ಹಂಸಪಕ್ಷಿಗಳು ಈಜುತ್ತಿವೆ ಎಂದು ಬಿಂಬಿಸಲಾಗಿದ್ದ ಚಿತ್ರಗಳನ್ನು ಸಂಭ್ರಮಿಸಿದ ಟ್ವೀಟ್‌ ವೊಂದು, ‘ನಿಸರ್ಗವು ಈಗ ತಾನೇ ನಮ್ಮ ಮೇಲೆ ಮರುಹೊಂದಾಣಿಕೆಯ ಬಟನ್ ಆನ್ ಮಾಡಿದೆ’ಎಂದು ಹೇಳಿದೆ.

ಜನರು ಚೇತರಿಸಿಕೊಳ್ಳುವ ನಿಸರ್ಗದ ಶಕ್ತಿಯನ್ನು ನಿಜವಾಗಿಯೂ ನಂಬಲು ಬಯಸಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ ಎನ್ನುತ್ತಾರೆ ಓಹಿಯೊದ ಕಾಲೇಜ್ ಆಫ್ ವೂಸ್ಟರ್‌ ನ ಪ್ರೊ.ಸುಸಾನ್ ಕ್ಲೇಟನ್. ‘ನಾವು ಏನೇ ಮಾಡಿದರೂ ಅದು ಮಹತ್ವದ್ದಲ್ಲ, ನಿಸರ್ಗಕ್ಕೆ ಅದಕ್ಕಿಂತ ಹೆಚ್ಚಿನ ಎತ್ತರಕ್ಕೆ ಏರುವ ಶಕ್ತಿಯಿದೆ ಎಂದು ಜನರು ನಂಬಿಕೊಂಡಿದ್ದಾರೆ ಎಂದರು.

ಕೃಪೆ: nationalgeographic.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News