ಕೊರೋನಾ ಭೀತಿ: 30 ಕೋಟಿ ಮಕ್ಕಳು ಮಧ್ಯಾಹ್ನದ ಬಿಸಿಯೂಟದಿಂದ ವಂಚಿತ

Update: 2020-03-21 16:41 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಮಾ. 21: ಶಾಲಾ ಬಿಸಿಯೂಟವನ್ನೇ ಅವಲಂಬಿಸಿರುವ ಸುಮಾರು 30 ಕೋಟಿ ಮಕ್ಕಳು ಈಗ ಕೊರೋನವೈರಸ್ ಸಾಂಕ್ರಾಮಿಕದಿಂದಾಗಿ ಶಾಲೆಗಳಿಂದ ಹೊರಗಿದ್ದಾರೆ ಎಂದು ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಎಫ್‌ಪಿ) ಶುಕ್ರವಾರ ಹೇಳಿದೆ.

ಕೋವಿಡ್-19 ಒಡ್ಡಿರುವ ಆರೋಗ್ಯ ಬೆದರಿಕೆಗಳ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಹೇರಲಾಗಿರುವ ಬೀಗಮುದ್ರೆಗಳಿಂದಾಗಿ 86 ಕೋಟಿಗೂ ಅಧಿಕ ಮಕ್ಕಳು ಈಗ ಶಾಲಾ ಕಾಲೇಜುಗಳಿಂದ ಹೊರಗಿದ್ದಾರೆ. ಇದು ಜಗತ್ತಿನ ಒಟ್ಟು ವಿದ್ಯಾರ್ಥಿ ಸಂಖ್ಯೆಯ ಸುಮಾರು ಅರ್ಧದಷ್ಟಿದೆ ಎಂದು ಡಬ್ಲುಎಫ್‌ಪಿ ತಿಳಿಸಿದೆ.

ಕೋಟ್ಯಂತರ ವಿದ್ಯಾರ್ಥಿಗಳು ಕಲಿಕೆಯಿಂದ ದೂರ ಇರುವ ಜೊತೆಗೆ, ಮಧ್ಯಾಹ್ನದ ಬಿಸಿಯೂಟದಿಂದಲೂ ವಂಚಿತರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಘಟಕ ಸಂಸ್ಥೆ ತಿಳಿಸಿದೆ.

ಸ್ವತಃ ವಿಶ್ವ ಆರೋಗ್ಯ ಕಾರ್ಯಕ್ರಮವು 61 ದೇಶಗಳಲ್ಲಿ ಶಾಲೆಗಳ ಮೂಲಕ 1.8 ಕೋಟಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವನ್ನು ಒದಗಿಸುತ್ತಿದೆ. ಆದರೆ, ಈಗ ಸುಮಾರು 90 ಲಕ್ಷ ವಿದ್ಯಾರ್ಥಿಗಳು ಅದರಿಂದ ವಂಚಿತರಾಗಿದ್ದಾರೆ ಎಂದಿದೆ.

ಶಾಲೆಗಳಿಂದ ಹೊರಗಿರುವ ಮಕ್ಕಳಿಗೆ ಮನೆಗೆ ಊಟ ತಲುಪಿಸುವುದು ಸೇರಿದಂತೆ ಅವರಿಗೆ ಊಟ ಒದಗಿಸುವ ಪರ್ಯಾಯ ವಿಧಾನಗಳ ಬಗ್ಗೆಸಂಸ್ಥೆಯು ಗಮನಹರಿಸುತ್ತಿದೆ ಎಂದಿದೆ.

‘‘ಕೋವಿಡ್-19 ಸಾಂಕ್ರಾಮಿಕದಿಂದಾಗಿ ಸುಮಾರು 30 ಕೋಟಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಈಗ ಮಧ್ಯಾಹ್ನದ ಊಟ ಲಭಿಸುತ್ತಿಲ್ಲ. ಅವರು ಇದೇ ಊಟವನ್ನು ಅವಲಂಬಿಸಿದ್ದಾರೆ’’ ಎಂದು ಡಬ್ಲ್ಯುಎಫ್‌ಪಿ ವಕ್ತಾರೆ ಎಲಿಝಬೆತ್ ಬೈರ್ಸ್ ಜಿನೀವದಿಂದ ಆನ್‌ಲೈನ್ ಮೂಲಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News