ಫ್ಯಾಕ್ಟ್ ಚೆಕ್: ಇಲ್ಲ, ಕೊರೋನಾ ವೈರಸ್ ಜೀವಿತಾವಧಿ 12 ಗಂಟೆಗಳು ಅಲ್ಲ

Update: 2020-03-21 18:37 GMT

ವಿಶ್ವಾದ್ಯಂತ ಕೊರೋನಾ ವೈರಸ್ ವಿರುದ್ಧ ಜೀವ ಪಣಕ್ಕಿಟ್ಟು ವೈದ್ಯರು, ಇತರ ವೈದ್ಯಕೀಯ ಸಿಬ್ಬಂದಿ ಸೆಣಸುತ್ತಿದ್ದಾರೆ. ಸರಕಾರಗಳು ಈ ಮಹಾಮಾರಿಯನ್ನು ನಿಯಂತ್ರಿಸುವುದು ಹೇಗೆ ಎಂಬ ಚಿಂತೆಯಲ್ಲಿವೆ. ಆದರೆ ಇನ್ನೊಂದೆಡೆ ಈ ಎಲ್ಲ ಮಹಾ ಪ್ರಯತ್ನಗಳಿಗೆ ಹಿನ್ನಡೆ ಉಂಟು ಮಾಡುವ ನಕಲಿ, ಸುಳ್ಳು ಸುದ್ದಿಗಳು ವೈರಸ್ ನಷ್ಟೇ ಅಪಾಯಕಾರಿ ಪ್ರಮಾಣದಲ್ಲಿ ಹರಡುತ್ತಿವೆ. ಹೀಗೆ ಫೇಸ್ ಬುಕ್, ವಾಟ್ಸಾಪ್ ಮೂಲಕ ಸುಳ್ಳು ಸುದ್ದಿ ಹರಡುವುದು ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಇದೆ. 

ಈಗ ವ್ಯಾಪಕವಾಗಿ ಹರಡುತ್ತಿರುವ ಹೊಸ ಸುಳ್ಳು ಸುದ್ದಿ ಕೊರೋನಾ ವೈರಸ್ ನ ಜೀವಿತಾವಧಿ ಕೇವಲ 12 ಗಂಟೆ, ಹಾಗಾಗಿ ಪ್ರಧಾನಿ ಮೋದಿ ಅವರು ರವಿವರಕ್ಕೆ ಘೋಷಿಸಿರುವ 14 ಗಂಟೆಗಳ ಜನತಾ ಕರ್ಫ್ಯೂನಿಂದ ಈ ಮಾರಕ ವೈರಸ್ ಇಲ್ಲವಾಗುತ್ತದೆ ಎಂಬುದು. ಅಂದರೆ ಈ ಸುಳ್ಳು ಸುದ್ದಿ ಪ್ರಕಾರ ಮಾರ್ಚ್ 22 ರ ರಾತ್ರಿ ಭಾರತ ಸಂಪೂರ್ಣವಾಗಿ ಕೊರೋನಾ ವೈರಸ್ ಮುಕ್ತ ದೇಶವಾಗಿಬಿಡುತ್ತದೆ ! 

ಅದೇ ರೀತಿ ಈ ವೈರಸ್ ಜೀವಿತಾವಧಿ ೨೪ ಗಂಟೆಗಳಾಗಿದ್ದು ರವಿವಾರ ಇಡೀ ದಿನ ದೇಶ ಸ್ಥಬ್ಧವಾದಾಗ ಇದು ಸಂಪೂರ್ಣವಾಗಿ ಇಲ್ಲವಾಗುತ್ತದೆ ಎಂಬುದು ಇನ್ನೊಂದು ಸುಳ್ಳು ಸುದ್ದಿ. 

ವಿಶ್ವ ಅರೋಗ್ಯ ಸಂಸ್ಥೆ ( WHO )ಪ್ರಕಾರ  COVID-19 ಕಾಯಿಲೆ ತರುವ ವೈರಸ್ ನ ಜೀವಿತಾವಧಿ ವಿವಿಧ ಮೇಲ್ಮೈಗಳ ಮೇಲೆ  ಎಷ್ಟು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅದು ಇತರ ಕೊರೋನಾ ವೈರಸ್ ಗಳ ಹಾಗೆ ವರ್ತಿಸುತ್ತದೆ ಎಂದು WHO ಹೇಳಿದೆ. 

" ವಿವಿಧ ಅಧ್ಯಯನಗಳ ಪ್ರಕಾರ ವಿವಿಧ ಕೊರೋನಾ ವೈರಸ್ ಗಳು (COVID-19 ವೈರಸ್ ಕುರಿತ ಪ್ರಾಥಮಿಕ ಮಾಹಿತಿ ಸಹಿತ ) ವಿವಿಧ ಮೇಲ್ಮೈಗಳ ಮೇಲೆ ಕೆಲವು ಗಂಟೆಗಳಿಂದ ಹಲವು ದಿನಗಳವರೆಗೆ ಬದುಕಬಹುದು. ಅದು ವಿವಿಧ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗಬಹುದು (ಉದಾ: ಮೇಲ್ಮೈಯ ವಿಧ, ತಾಪಮಾನ, ವಾತಾವರಣದ ತೇವ ಇತ್ಯಾದಿ ) " ಎಂದು ವಿಶ್ವ ಅರೋಗ್ಯ ಸಂಸ್ಥೆ ಹೇಳಿದೆ. 

ಯು ಎಸ್ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಹೆಲ್ತ್ (NIH) ನ ನೀಲ್ ವಾನ್ ಡಾರ್ಮೆಲ್ಹಾನ್ ಎಂಬ ವೈರಾಲಜಿಸ್ಟ್ ಈ ಬಗ್ಗೆ ಮೊದಲು ಅಧ್ಯಯನ ಮಾಡಿದವರಲ್ಲಿ ಪ್ರಮುಖರು. ಮಾರ್ಚ್ 17 ರಂದು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ನಲ್ಲಿ ಪ್ರಕಟವಾದ ಅವರ ಅಧ್ಯಯನದ ಪ್ರಕಾರ ಈ ವೈರಸ್ ಗಾಳಿಯಲ್ಲಿ ಮೂರು ಗಂಟೆವರೆಗೆ ಇರಬಲ್ಲದು. ಆದರೆ ಇತರ ಮೇಲ್ಮೈಗಳಲ್ಲಿ ಹೆಚ್ಚು ಕಾಲ್ ಬದುಕುತ್ತದೆ. ಕಾರ್ಡ್ ಬೋರ್ಡ್ ಮೇಲ್ಮೈಯಲ್ಲಿ 24 ಗಂಟೆವರೆಗೆ ಹಾಗು ಪ್ಲಾಸ್ಟಿಕ್ ಹಾಗು ಲೋಹದ ಮೇಲ್ಮೈಗಳ ಮೇಲೆ ಎರಡರಿಂದ ಮೂರು ದಿನಗಳವರೆಗೂ ಬದುಕಬಲ್ಲದು. 

ದಿ ಜರ್ನಲ್ ಆಫ್ ಹಾಸ್ಪಿಟಲ್ ಇನ್ಫೆಕ್ಷನ್ ನ ಅಧ್ಯಯನದ ಪ್ರಕಾರ ಕೊರೋನಾ ವೈರಸ್ ಗಳು ಲೋಹ, ಗ್ಲಾಸ್ ಅಥವಾ ಪ್ಲಾಸ್ಟಿಕ್ ನಂತಹ ನಿರ್ಜೀವ ಮೇಲ್ಮೈ ಗಳ ಮೇಲೆ ಒಂಬತ್ತು ದಿನಗಳವರೆಗೂ ಜೀವಿಸಬಹುದು.  

WHO ಪ್ರಕಾರ ಯಾವುದೇ ಮೇಲ್ಮೈ ಮೇಲೆ ವೈರಸ್ ಇರಬಹುದು ಎಂದು ನಿಮಗನಿಸಿದರೆ ಅದನ್ನು ಸರಳವಾದ ಯಾವುದಾದರೂ ಸೋಂಕುನಿವಾರಕ ಬಳಸಿ ಇಲ್ಲವಾಗಿಸಬಹುದು. ಹಾಗೆಯೆ ನಿಮ್ಮ ಕೈಗಳನ್ನು ಸೋಪು ಮತ್ತು ನೀರುನಿಂದ ತೊಳೆದುಕೊಳ್ಳಬಹುದು. ಮತ್ತು ನಿಮ್ಮ ಕಣ್ಣುಗಳು, ಬಾಯಿ ಮತ್ತು ಮೂಗನ್ನು ಮುಟ್ಟಬೇಡಿ.

ಆದರೆ ಇಂತಹ ಮಾಹಿತಿಗಳನ್ನು ಅಧಿಕೃತ ಮೂಲಗಳಿಂದ ಖಚಿತಪಡಿಸಿಕೊಳ್ಳದೆ ಸಾಮಾನ್ಯರು ಮಾತ್ರವಲ್ಲದೆ ರಜನೀಕಾಂತ್, ಸೋನು ನಿಗಮ್ ರಂತಹ ಗಣ್ಯರೂ ಸುಳ್ಳು ಸುದ್ದಿ ಹರಡಿಬಿಡುತ್ತಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News