×
Ad

ಕೊರೋನ ವಿರುದ್ಧ ಒಂದಾದ ಜನತೆ: ಜನತಾ ಕರ್ಫ್ಯೂಗೆ ಭಾರೀ ಬೆಂಬಲ

Update: 2020-03-22 23:24 IST

ಹೊಸದಿಲ್ಲಿ, ಮಾ.22: ಮಾರಣಾಂತಿಕ ಕೊರೋನ ವೈರಸ್ ಸೋಂಕು ವೈರಸ್‌ನ ಹರಡುವಿಕೆಯನ್ನು ನಿಯಂತ್ರಿಸುವ ಯತ್ನವಾಗಿ ಪ್ರಧಾನಿ ನರೇಂದ್ರ ಮೋದಿ ರವಿವಾರ ಕರೆ ನೀಡಿರುವ ‘ಜನತಾ ಕರ್ಫ್ಯೂ’ವಿಗೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮಹಾರಾಷ್ಟ್ರ, ಉತ್ತರಪ್ರದೇಶ ಸೇರಿದಂತೆ ಬಹುತೇಕ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಜನರು ಇಂದು ಮನೆಯಲ್ಲಿಯೇ ಉಳಿದುಕೊಳ್ಳುವ ಮೂಲಕ ಸ್ವಯಂಪ್ರೇರಿತ ಕರ್ಫ್ಯೂಗೆ ಬೆಂಬಲ ಸೂಚಿಸಿದರು.

ಭಾರತದಾದ್ಯಂತ ಈವರೆಗೆ ಕೊರೋನಾ ವೈರಸ್‌ನಿಂದಾಗಿ ಆರು ಮಂದಿ ಮೃತಪಟ್ಟಿದ್ದು, 324 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ.

ದೇಶದ ಪ್ರಮುಖ ನಗರಗಳಾದ ದಿಲ್ಲಿ, ಮುಂಬೈ, ಬೆಂಗಳೂರು, ಅಹ್ಮದಾಬಾದ್, ಕೋಲ್ಕತಾ, ಇಂದೋರ್ ನಗರಗಳಲ್ಲಿ ಇಂದು ಜನಜೀವನ ಸಂಪೂರ್ಣ ಸ್ತಬ್ದಗೊಂಡಿತ್ತು. ಜನರೆಲ್ಲರೂ ಮನೆಗಳಲ್ಲೇ ಉಳಿದುಕೊಂಡಿದ್ದರಿಂದ ನಗರಗಳಲ್ಲಿ ನೀರವ ವೌನ ನೆಲೆಸಿತ್ತು.

ಕೊರೋನಾ ವೈರಸ್ ಹರಡುವುದನ್ನು ತಡೆಯಲು ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂಬ ಪ್ರಧಾನಿಯ ಕರೆಗೆ ಇಡೀ ದೇಶದ ಜನತೆ ಜಾತಿ,ಧರ್ಮ, ಭಾಷೆ ,ಪಕ್ಷ ಭೇದವಿಲ್ಲದೆ ಸ್ಪಂದಿಸಿದ್ದಾರೆ.ಎಲ್ಲಾ ನಗರಗಳಲ್ಲಿ ಶಾಪಿಂಗ್ ಮಾಲ್‌ಗಳು, ಮಾರುಕಟ್ಟೆ ಪ್ರದೇಶಗಳು ಹಾಗೂ ಉದ್ಯಮ ಸಂಸ್ಥಾಪನೆಗಳು ರವಿವಾರ ಸಂಪೂರ್ಣ ಮುಚ್ಚುಗಡೆಗೊಂಡಿದ್ದವು ಕೊರೋನಾ ವೈರಸ್‌ನ ಹರಡುವಿಕೆಯನ್ನು ತಡೆಯಲು ಭಾರತೀಯ ರೈಲ್ವೆ ಮಾರ್ಚ್ 31ರವರೆಗೆ ಎಲ್ಲಾ ಪ್ರಯಾಣಿಕ ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಿದೆ.

ಎಲ್ಲೆಡೆ ಜನಜೀವನ ಸ್ತಬ್ಧ

ಗುಜರಾತ್, ಪಂಜಾಬ್, ಹರ್ಯಾಣ, ಮಧ್ಯಪ್ರದೇಶ, ತಮಿಳುನಾಡು, ಕೇರಳಗಳಲ್ಲಿ ಜನತಾ ಕರ್ಫ್ಯೂ ಸಂಪೂರ್ಣ ಯಶಸ್ವಿಯಾಗಿತ್ತು. ಔಷಧಿ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಾಣಿಜ್ಯ ಸಂಸ್ಥೆಗಳು ಇಂದು ಕಾರ್ಯಾಚರಿಸಲಿಲ್ಲ. ಸಾರ್ವಜನಿಕ ಸಾರಿಗೆ ಬಸ್‌ಗಳು ಸೇರಿದಂತೆ ಬಹುತೇಕ ಕಡೆಗಳಲ್ಲಿ ವಾಹನಗಳು ಬೀದಿಗಿಳಿಯಲಿಲ್ಲ.

ಚೆನ್ನೈ, ಮುಂಬೈ, ಎರ್ನಾಕುಲಂ, ಲಕ್ನೋ, ಪಾಟ್ನಾ ಸೇರಿದಂತೆ ಇತರ ಹಲವು ಭಾರತೀಯ ನಗರಗಳಲ್ಲಿಯೂ ಸಾಮಾನ್ಯ ಜನಜೀವನ ವಸ್ತುಶಃ ಸ್ತಬ್ಧಗೊಂಡಿತ್ತು. ಬಸ್‌ನಿಲ್ದಾಣಗಳು, ರೈಲು ನಿಲ್ದಾಣಗಳು ಹಾಗೂ ರಿಟೇಲ್ ಅಂಗಡಿಗಳು ಮುಚ್ಚುಗಡೆಗೊಂಡಿದ್ದವು.

ಆದಾಗ್ಯೂ ತಮಿಳುನಾಡಿನ ಕೆಲವೆಡೆ ಪ್ರಮುಖ ರಸ್ತೆಗಳು ಖಾಸಗಿ ವಾಹನಗಳು ಓಡಾಟ ನಡೆಸಿದ್ದಾಗಿ ಮಾಧ್ಯಮ ವರದಿಗಳು ತಿಳಿಸಿವೆ. ರಾಜ್ಯದ ಎಲ್ಲಾ ನಗರಗಳಲ್ಲಿ ಉಪಹಾರ ಗೃಹಗಳು ಮುಚ್ಚುಗಡೆಗೊಂಡಿದ್ದರೆ, ಸ್ಥಳೀಯಾಡಳಿತ ನಡೆಸುವ ಅಮ್ಮಾ ಕ್ಯಾಂಟಿನ್ ತೆರೆದಿದ್ದವು. ಜನತೆಯ ಹಿತದೃಷ್ಟಿಯಿಂದ ಜನತಾಕರ್ಫ್ಯೂವನ್ನು ಸೋಮವಾರ ಬೆಳಗ್ಗೆ 5:00 ಗಂಟೆಯವರೆಗೂ ಮುಂದುವರಿಯಲಿದೆಯೆಂದು ತಮಿಳುನಾಡು ಸರಕಾರ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News