ಅಶ್ಲೀಲ ಟ್ವೀಟ್‌ ಗಳನ್ನು ಲೈಕ್ ಮಾಡಿದ ಸರಕಾರದ ಸಾರ್ವಜನಿಕ ಸಂಪರ್ಕ ವಿಭಾಗದ ಟ್ವಿಟರ್ !

Update: 2020-03-22 18:20 GMT

ಹೊಸದಿಲ್ಲಿ, ಮಾ. 22: ಭಾರತ ಸರಕಾರದ ಸಾರ್ವಜನಿಕ ಸಂಪರ್ಕ ವಿಭಾಗ ಪ್ರೆಸ್ ಇನ್‌ಫಾರ್ಮೇಷನ್ ಬ್ಯುರೋ (ಪಿಐಬಿ)ದ ಅಧಿಕೃತ ಇಂಗ್ಲೀಷ್ ಮತ್ತು ಹಿಂದಿ ಟ್ವಿಟರ್ ಖಾತೆಗಳನ್ನು ರವಿವಾರ ಹ್ಯಾಕ್ ಮಾಡಿರುವಂತಿದ್ದು, ಹಲವಾರು ಜಪಾನಿ ಮತ್ತು ಕೆಲವು ಅಶ್ಲೀಲ ಟ್ವೀಟ್‌ಗಳನ್ನು ಈ ಖಾತೆಗಳು ಲೈಕ್ ಮಾಡುತ್ತಿರುವಂತೆ ಕಂಡುಬಂದಿದೆ.

ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ಕೆಲವು ಟ್ವೀಟ್‌ ಗಳು ಸ್ವಯಂಚಾಲಿತವಾಗಿ ಪಿಐಬಿಯ ಹ್ಯಾಂಡಲ್‌ಗಳಿಂದ ಲೈಕ್ ಮಾಡಲ್ಪಡುತ್ತಿವೆ ಎಂದು ಹಿರಿಯ ಅಧಿಕಾರಿಯೋರ್ವರು ಹೇಳಿದರು.

‘‘ನಾವು ಮತ್ತೊಮ್ಮೆ ಈ ಸಮಸ್ಯೆಯನ್ನು ಟ್ವಿಟರ್‌ನ ಗಮನಕ್ಕೆ ತಂದಿದ್ದು,ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಕೆಲವು ತಿಂಗಳುಗಳ ಹಿಂದೆಯೂ ಇದೇ ಸಮಸ್ಯೆ ವರದಿಯಾಗಿತ್ತು ಮತ್ತು ಆಗಲೂ ನಾವು ಟ್ವಿಟರ್‌ನ ಗಮನಕ್ಕೆ ತಂದಿದ್ದೆವು’’ ’ಎಂದು ಅವರು ತಿಳಿಸಿದರು.

ಅಮೆರಿಕದಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಚರ್ಚೆಗಳ ಕುರಿತ ಟ್ವೀಟ್ ಸೇರಿದಂತೆ ವಿವಿಧ ಟ್ವೀಟ್‌ಗಳನ್ನು ಈ ಹ್ಯಾಂಡಲ್‌ ಗಳು ಲೈಕ್ ಮಾಡಿವೆ. ಹಲವಾರು ಬಳಕೆದಾರರು ಪಿಐಬಿ ಖಾತೆಗಳ ಚಟುವಟಿಕೆಗಳನ್ನು ಗಮನಿಸಿದ್ದಾರೆ.

ಸುಳ್ಳುಸುದ್ದಿಗಳನ್ನು ಬಯಲಿಗೆಳೆಯುವ ಜಾಲತಾಣ ‘ಆಲ್ಟ್‌ನ್ಯೂಸ್’ನ ಸಹಸ್ಥಾಪಕ ಸ್ಯಾಮ್ ಜಾವೇದ್ ಅವರು,‘ಜನತಾ ಕರ್ಫ್ಯೂ ಸಂದರ್ಭದಲ್ಲಿ ಆಸಕ್ತಿದಾಯಕ ವಿಷಯವಿಲ್ಲಿದೆ. ಪಿಐಬಿ ಇಂಡಿಯಾ ಹ್ಯಾಂಡಲ್‌ಗೆ ಭೇಟಿ ನೀಡಿ ಅವರು ಲೈಕ್ ಮಾಡಿರುವ ಟ್ವೀಟ್‌ಗಳನ್ನು ಪರಿಶೀಲಿಸಿ. ನಂತರ ನನಗೆ ಥ್ಯಾಂಕ್ಸ್ ಹೇಳಿ’ ಎಂದು ಟ್ವೀಟಿಸಿದ್ದಾರೆ.

 ತನ್ಮಧ್ಯೆ ಉದ್ಯೋಗಿಗಳು ವೈಯಕ್ತಿಕ ಸಾಮಾಜಿಕ ಜಾಲತಾಣ ಹ್ಯಾಂಡಲ್‌ಗಳು ಮತ್ತು ಕಚೇರಿಯ ಅಧಿಕೃತ ಹ್ಯಾಂಡಲ್ ಗಳನ್ನು ನಿರ್ವಹಿಸಲು ವಿಭಿನ್ನ ಬ್ರೌಸರ್‌ಗಳನ್ನು ಬಳಸುವಂತೆ ಲೇಖಕ ಕಾರ್ತಿಕ್ ಶ್ರೀನಿವಾಸನ್ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News