ಶೇ. 80ರಷ್ಟು ಕೊರೋನ ವೈರಸ್ ರೋಗಿಗಳು ತಾವಾಗಿಯೇ ಚೇತರಿಸಿಕೊಳ್ಳುತ್ತಾರೆ: ಐಸಿಎಂಆರ್

Update: 2020-03-22 18:27 GMT

 ಹೊಸದಿಲ್ಲಿ,ಮಾ.22: ಶೇ.80ರಷ್ಟು ಜನರು ಕೊರೋನವೈರಸ್ ಸೋಂಕಿಗೊಳಗಾಗಿ ದ್ದರೂ ಕೇವಲ ಶೀತದಂತಹ ಜ್ವರದ ಲಕ್ಷಣಗಳನ್ನು ಅನುಭವಿಸುತ್ತಾರೆ ಮತ್ತು ತನ್ನಿಂತಾನೇ ರೋಗದಿಂದ ಚೇತರಿಸಿಕೊಳ್ಳುತ್ತಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾ ನಿರ್ದೇಶಕ ಬಲರಾಮ ಭಾರ್ಗವ ಅವರು ರವಿವಾರ ಇಲ್ಲಿ ಹೇಳಿದರು.

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಾಯಿಲೆಯನ್ನು ಅರಿತುಕೊಳ್ಳುವುದು ಅಗತ್ಯವಾಗಿದೆ. ಶೇ.80ರಷ್ಟು ಜನರು ತಾವಾಗಿಯೇ ಚೇತರಿಸಿಕೊಳ್ಳುತ್ತಾರೆ. ಶೇ.20ರಷ್ಟು ಜನರು ಕೆಮ್ಮು,ಶೀತ,ಜ್ವರಗಳನ್ನು ಅನುಭವಿಸಬಹುದು ಮತ್ತು ಅವರ ಪೈಕಿ ಕೆಲವರನ್ನು ಆಸ್ಪತ್ರೆಗೆ ದಾಖಲಿಸುವದು ಅಗತ್ಯವಾಗಬಹುದು. ಆಸ್ಪತ್ರೆಗೆ ದಾಖಲಾದವರ ಪೈಕಿ ಶೇ.5ರಷ್ಟು ರೋಗಿಗಳಿಗೆ ಜೀವರಕ್ಷಕ ಚಿಕಿತ್ಸೆಯನ್ನು ನೀಡಲಾಗುತ್ತಿದೆ,ಹೊಸ ಔಷಧಿಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

‘ನಾವು ಈವರೆಗೆ 15,000-17,000 ಪರೀಕ್ಷೆಗಳನ್ನು ನಡೆಸಿದ್ದೇವೆ. ಪ್ರತಿ ದಿನ 10,000 ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದ್ದೇವೆ,ಅಂದರೆ ವಾರಕ್ಕೆ 50,000-70,000 ಪರೀಕ್ಷೆಗಳನ್ನು ನಡೆಸಲು ನಮಗೆ ಸಾಧ್ಯವಿದೆ ’ಎಂದರು.

ಜನರು ಮನೆಗಳಿಂದ ಹೊರಗೆ ಬಾರದಂತೆ ಸ್ವಯಂ ನಿರ್ಬಂಧ ಹೇರಿಕೊಳ್ಳುವುದು ಸೋಂಕು ಹರಡುವಿಕೆಯನ್ನು ತಡೆಯಲು ಅತ್ಯಂತ ಸುಲಭ ವಿಧಾನವಾಗಿದೆ. ಕೊರೋನ ವೈರಸ್ ಗಾಳಿಯಲ್ಲಿರುವುದಿಲ್ಲ,ಅದು ರೋಗಿಯು ಸೀನಿದಾಗ,ಕೆಮ್ಮಿದಾಗ ಹೊರಸೂಸುವ ಹನಿಗಳ ಮೂಲಕ ಹರಡುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News