ಕೋವಿಡ್-19: ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ಕೆನಡ

Update: 2020-03-23 04:29 GMT

ಹೊಸದಿಲ್ಲಿ, ಮಾ.23: ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಟೋಕಿಯೊ ಒಲಿಂಪಿಕ್ಸ್‌-2020ನಿಂದ ಹಿಂದೆ ಸರಿಯುವುದಾಗಿ ಕೆನಡ ಪ್ರಕಟಿಸಿದೆ. ಈ ಮೂಲಕ ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ಮೊಟ್ಟಮೊದಲ ದೇಶ ಎನಿಸಿಕೊಂಡಿದೆ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಟೀಮ್ ಕೆನಡ ಭಾಗವಹಿಸುವುದಿಲ್ಲ ಎಂದು ಕೆನಡಿಯನ್ ಒಲಿಂಪಿಕ್ ಸಮಿತಿ (ಸಿಓಸಿ) ಮತ್ತು ಪ್ಯಾರಾಲಿಂಪಿಕ್ಸ್ ಸಮಿತಿ (ಸಿಪಿಸಿ) ಸ್ಪಷ್ಟಪಡಿಸಿದೆ.

ಜುಲೈನಲ್ಲಿ ಒಲಿಂಪಿಕ್ಸ್ ಆಯೋಜಿಸುವುದಕ್ಕೆ ಕಳೆದ 48 ಗಂಟೆಗಳಲ್ಲಿ ವಿರೋಧ ಬಲವಾಗುತ್ತಿದ್ದು, ಯುಎಸ್ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಮತ್ತು ಯುಕೆ ಅಥ್ಲೆಟಿಕ್ಸ್‌ನಂಥ ಪ್ರಮುಖ ಹಕ್ಕುದಾರರು, ಹಲವು ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳು ಇದನ್ನು ವಿಳಂಬ ಮಾಡುವಂತೆ ಒತ್ತಾಯಿಸಿವೆ.

ಕೊರೋನ ವೈರಸ್ ಸಾಂಕ್ರಾಮಿಕ ಹರಡಿದ ಬಳಿಕ 13 ಸಾವಿರಕ್ಕೂ ಹೆಚ್ಚು ಮಂದಿ ವಿಶ್ವಾದ್ಯಂತ ಬಲಿಯಾಗಿದ್ದಾರೆ.
ಒಲಿಂಪಿಕ್ಸ್ ಕೂಟವನ್ನು ಒಂದು ವರ್ಷದ ಕಾಲ ಮುಂದೂಡುವಂತೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ, ಅಂತಾರಾಷ್ಟ್ರೀಯ ಪಾರಾಲಿಂಪಿಕ್ಸ್ ಸಿಮಿತಿ ಮತ್ತು ವಿಶ್ವ ಆರೋಗ್ಯ ಸಮಿತಿಯನ್ನು ಸಿಒಸಿ ಮತ್ತು ಸಿಪಿಸಿ ಆಗ್ರಹಿಸುತ್ತಿದೆ. ಜತೆಗೆ ವೇಳಾಪಟ್ಟಿ ಬದಲಿಸುವುದರಿಂದ ಆಗುವ ಸಂಕೀರ್ಣತೆಗಳು ಮತ್ತು ಋಣಾತ್ಮಕ ಅಂಶಗಳನ್ನು ತಡೆಯಲು ಅಗತ್ಯವಾದ ನೆರವನ್ನು ನೀಡಬೇಕು ಎಂದು ಸಮಿತಿ ಹೇಳಿಕೆ ನೀಡಿದೆ.

ವಿಶ್ವ ಸಮುದಾಯ ಮತ್ತು ಅಥ್ಲೀಟ್‌ಗಳ ಆರೋಗ್ಯ ಮತ್ತು ಸುರಕ್ಷತೆ ಎಲ್ಲಕ್ಕಿಂತ ಪ್ರಮುಖ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News