ಮುಂಬೈಭಾಗ್, ಲಕ್ನೋ: ಸಿಎಎ ಪ್ರತಿಭಟನೆ ತಾತ್ಕಾಲಿಕ ರದ್ದು

Update: 2020-03-23 16:47 GMT

ಹೊಸದಿಲ್ಲಿ, ಮಾ.23: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಹಾಗೂ ಪ್ರಸ್ತಾವಿತ ರಾಷ್ಟ್ರೀಯ ಪೌರರ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆ ವಿರುದ್ಧ ಮುಂಬೈನಲ್ಲಿ ಹಾಗೂ ಉತ್ತರಪ್ರದೇಶದ ಲಕ್ನೋದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಕೊರೋನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ರದ್ದುಪಡಿಸ ಲಾಗಿದೆ.

ಲಕ್ನೋದ ಗಡಿಯಾರಗೋಪುರದ ಬಳಿ ಧರಣಿ ನಿರತರಾಗಿರುವ ಪ್ರತಿಭಟನ ಕಾರರ ಗುಂಪೊಂದು ಸೋಮವಾರ ಪೊಲೀಸ್ ಆಯುಕ್ತರಿಗೆ ಸಲ್ಲಿಸಿದ ಪತ್ರದಲ್ಲಿ ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ತಾವು ನಡೆಸುತ್ತಿರುವ ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವುದಾಗಿ ತಿಳಿಸಿದ್ದಾರೆ.

ಕೊರೋನ ವೈರಸ್ ತಡೆಗೆ ಹೇರಲಾಗಿರುವ ಲಾಕ್‌ಡೌನ್ ಕೊನೆಗೊಂಡ ಬಳಿಕ ತಾವು ಪ್ರತಿಭಟನೆ ಪುನಾರಂಭಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಈ ಪ್ರತಿಭಟನೆಯು ಕೊನೆಗೊಂಡಿಲ್ಲ ಎಂಬುದನ್ನು ಸಾಂಕೇತಿಕವಾಗಿ ಸಾರಲು ಕೆಲವು ಮಹಿಳೆಯರು ಧರಣಿ ಸ್ಥಳದಲ್ಲಿ ‘ದುಪ್ಪಟ್ಟಾ’ಗಳನ್ನು ತೊರೆದುಹೋಗಿದ್ದಾರೆ.

ಈ ಮಧ್ಯೆ ಕೇಂದ್ರ ಮುಂಬೈನ ನಾಗಪಾಡದಲ್ಲಿ ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರು ಕೂಡಾ ಕೊರೋನಾ ವೈರಸ್ ಪಿಡುಗಿನ ಹಿನ್ನೆಲೆಯಲ್ಲಿ ತಮ್ಮ ಧರಣಿಯನ್ನು ತಾತ್ಕಾಲಿಕವಾಗಿ ಹಿಂತೆಗೆದು ಕೊಂಡಿದ್ದಾರೆ.

 ‘‘ನಮ್ಮ ಹೋರಾಟವು ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಜಾರಿಗೊಳಿಸಹೊರಟಿರುವ ಕೇಂದ್ರ ಸರಕಾರದ ವಿರುದ್ಧವಾಗಿದೆ. ಆದರೆ ಮಾರಣಾಂತಿಕ ಕೊರೋನಾ ವೈರಸ್ ಸೋಂಕಿನ ವಿರುದ್ಧ ಹೋರಾಡುವ ದೃಢನಿರ್ಧಾರದೊಂದಿಗೆ ನಾವು ಕೇಂದ್ರ ಸರಕಾರದ ಜೊತೆ ನಿಲ್ಲಲಿದ್ದೇವೆ. ದೇಶಕ್ಕೆ ನಾವು ಸಲ್ಲಿಸಬೇಕಾಗಿರುವ ಕರ್ತವ್ಯದ ಭಾಗವಾಗಿ ನಾವು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುದ್ದೇವೆ’’ ಎಂದು ಹೇಳಿಕೆಯು ತಿಳಿಸಿದೆ.

ದಿಲ್ಲಿಯಲ್ಲಿ ಸಿಎಎ-ಎನ್‌ಆರ್‌ಸಿ ವಿರೋಧಿ ಪ್ರತಿಭಟನೆ ನಡೆಯುತ್ತಿರುವ ಶಾಹೀನ್‌ಭಾಗ್‌ನಿಂದ ಪ್ರೇರಿತರಾಗಿ ಮುಂಬೈನ ನಾಗಪಾಡದಲ್ಲಿ ಮಹಿಳೆಯರು ನಡೆಸುತ್ತಿರುವ ಈ ಧರಣಿಯು ‘ಮುಂಬೈ ಭಾಗ್’ ಎಂದೇ ಖ್ಯಾತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News