ವೃತ್ತಪತ್ರಿಕೆಗಳು ಸುರಕ್ಷಿತ, ಅವುಗಳ ಅಬಾಧಿತ ಪೂರೈಕೆ ಮುಖ್ಯ: ಸರಕಾರ

Update: 2020-03-24 17:33 GMT

ಹೊಸದಿಲ್ಲಿ, ಮಾ. 24: ಕೊರೋನವೈರಸ್ ಸೋಂಕು ಹೆಚ್ಚುತ್ತಿರುವ ನಡುವೆಯೇ ಸರಕಾರವು, ಜನರಿಗೆ ನಿಖರವಾದ ಮಾಹಿತಿ ಮತ್ತು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ತಿಳಿಯುವಂತಾಗಲು ವೃತ್ತಪತ್ರಿಕೆಗಳ ಅಬಾಧಿತ ಪೂರೈಕೆ ಮುಖ್ಯವಾಗಿದೆ ಮತ್ತು ವೃತ್ತಪತ್ರಿಕೆಗಳು ಸುರಕ್ಷಿತವಾಗಿವೆ ಎಂದು ಹೇಳಿದೆ.

ಕೊರೋನವೈರಸ್ ಪಿಡುಗಿನ ಹಿನ್ನೆಲೆಯಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಕಾರ್ಯಾಚರಣೆಗಳ ಮುಂದುವರಿಕೆಯ ಮಹತ್ವವನ್ನು ಪ್ರಮುಖವಾಗಿ ಬಿಂಬಿಸಿ ಸುತ್ತೋಲೆಯೊಂದನ್ನು ಹೊರಡಿಸಿರುವ ಕೇಂದ್ರ ಸರಕಾರವು,ಜನರಿಗೆ ಸಕಾಲಿಕ ಮತ್ತು ಅಧಿಕೃತ ಮಾಹಿತಿಗಳು ತಲುಪುವಂತಾಗಲು ಮಾಧ್ಯಮಗಳ ಕಾರ್ಯ ನಿರ್ವಹಣೆಗೆ ಅನುಕೂಲತೆಗಳನ್ನು ಒದಗಿಸುವಂತೆ ಎಲ್ಲ ರಾಜ್ಯಗಳಿಗೆ ಆಗ್ರಹಿಸಿದೆ.

ಮಾ.23ರಂದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರವೊಂದನ್ನು ಬರೆದಿರುವ ವಾರ್ತಾ ಮತ್ತು ಪ್ರಸಾರ ಸಚಿವಾಲಯವು,ಜನರಲ್ಲಿ ಅರಿವು ಮೂಡಿಸಲು ಮತ್ತು ಮಹತ್ವದ ಸಂದೇಶಗಳನ್ನು ನೀಡಲು ಮಾತ್ರವಲ್ಲ,ದೇಶಕ್ಕೆ ಇತ್ತೀಚಿನ ಬೆಳವಣಿಗೆಗಳ ಬಗ್ಗೆಯೂ ತಿಳಿಸುತ್ತಿರಲು ಮತ್ತು ಸುಳ್ಳು ಹಾಗೂ ನಕಲಿ ಸುದ್ದಿಗಳ ಹರಡುವಿಕೆಯನ್ನು ತಡೆಯಲು ಮಾಧ್ಯಮಗಳ ಸೂಕ್ತ ಕಾರ್ಯ ನಿರ್ವಹಣೆಯು ಅಗತ್ಯವಾಗಿದೆ ಎಂದು ಹೇಳಿದೆ.

ವಿಶ್ವದ ಯಾವುದೇ ಭಾಗದಲ್ಲಿ ವೃತ್ತಪತ್ರಿಕೆಗಳ ಪೂರೈಕೆ ಸ್ಥಗಿತಗೊಂಡಿಲ್ಲ. ಕೊರೋನವೈರಸ್‌ನಿಂದ ತೀವ್ರ ಪೀಡಿತ ದೇಶಗಳು ಸಹ ವೃತ್ತಪತ್ರಿಕೆಗಳ ಪ್ರಸಾರವನ್ನು ನಿಲ್ಲಿಸಿಲ್ಲ. ವೃತ್ತಪತ್ರಿಕೆಗಳ ಸ್ಪರ್ಶ ಓದುವಿಕೆ ಮತ್ತು ನಿರ್ವಹಣೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಸಾಂಕ್ರಾಮಿಕ ರೋಗಗಳ ಕುರಿತು ಮಹಾರಾಷ್ಟ್ರ ಸರಕಾರಕ್ಕೆ ತಾಂತ್ರಿಕ ಸಲಹೆಗಾರರಾಗಿರುವ ಡಾ.ಸುಭಾಷ ಸಾಳುಂಕೆ ತಿಳಿಸಿದರು.

ವೃತ್ತಪತ್ರಿಕೆಗಳು ಸುರಕ್ಷಿತವಾಗಿವೆ ಎನ್ನುವದನ್ನು ದೃಢಪಡಿಸಿರುವ ವೈರಾಣು ತಜ್ಞರು, ವೃತ್ತಪತ್ರಿಕೆಯನ್ನು ಕೈಗೆತ್ತಿಕೊಂಡರೆ ಸೋಂಕಿಗೆ ಗುರಿಯಾಗುವ ಸಾಧ್ಯತೆಗಳು ಇಲ್ಲವೇ ಇಲ್ಲ. ಜೀವಿಗಳ ಕೋಶಗಳನ್ನು ಹೊರತುಪಡಿಸಿ ಇತರ ಹೆಚ್ಚಿನ ಮೇಲ್ಮೈಗಳಲ್ಲಿ ಕೊರೋನವೈರಸ್ ಹೆಚ್ಚು ಸಮಯ ಬದುಕುಳಿಯುವುದಿಲ್ಲ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರಗಳು ಈಗಾಗಲೇ ಸ್ಪಷ್ಟಪಡಿಸಿವೆ.

ವೃತ್ತಪತ್ರಿಕೆಗಳು ಅಸುರಕ್ಷಿತ ಎನ್ನುವುದಲ್ಲಿ ಯಾವುದೇ ತಾರ್ಕಿಕತೆ ಇಲ್ಲ ಎಂದು ಕೊಝಿಕ್ಕೋಡ್‌ನ ಬೇಬಿ ಮೆಮೋರಿಯಲ್ ಹಾಸ್ಪಿಟಲ್‌ನ ಡಾ.ಅನೂಪ ಕುಮಾರ ಹೇಳಿದರೆ,‘ನೀವು ಜನಸಂದಣಿಯಿರುವ ಕೊಠಡಿಯಲ್ಲಿ ವೃತ್ತಪತ್ರಿಕೆಯನ್ನು ಓದುತ್ತಿದ್ದರೆ ನಿಮಗೆ ಸೋಂಕು ತಗಲುವ ಅಪಾಯವಿದೆ. ಆದರೆ ವೃತ್ತಪತ್ರಿಕೆಯಿಂದಲ್ಲ,ನೀವು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದಿರುವುದು ಸೋಂಕಿಗೆ ಕಾರಣವಾಗುತ್ತದೆ. ವೈರಾಣುಗಳು ಸೋಂಕನ್ನುಂಟು ಮಾಡುವಷ್ಟು ಸಮಯ ಕಾಗದದ ಮೇಲೆ ಬದುಕಿರುವುದಿಲ್ಲ ’ಎಂದು ಏಮ್ಸ್ ನಿರ್ದೇಶಕ ಡಾ.ರಣದೀಪ ಗುಲೇರಿಯಾ ತಿಳಿಸಿದರು.

 ಬೆಲ್ಲೆ ವ್ಯೆ ಕ್ಲಿನಿಕ್‌ನ ಡಾ.ರಾಹುಲ್ ಜೈನ್ ಮತ್ತು ಫೋರ್ಟಿಸ್ ಸಿ-ಡಾಕ್‌ನ ನಿರ್ದೇಶಕ ಡಾ.ಅನೂಪ ಮಿಶ್ರಾ ಅವರೂ ಇದೇ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವದಂತಿಗಳನ್ನು ನಂಬದಂತೆ ಜನರನ್ನು ಆಗ್ರಹಿಸಿರುವ ಅವರು, ವೃತ್ತಪತ್ರಿಕೆಗಳಿಂದ ಸೋಂಕು ಹರಡುವ ಸಾಧ್ಯತೆ ಶೂನ್ಯವಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News