ಕೊರೋನ ವೈರಸ್ ಹಿನ್ನೆಲೆಯಲ್ಲಿ ಸ್ಯಾನಿಟೈಸರ್‌ಗಳು, ವೆಂಟಿಲೇಟರ್‌ಗಳ ರಫ್ತಿಗೆ ನಿಷೇಧ

Update: 2020-03-24 17:37 GMT

ಹೊಸದಿಲ್ಲಿ, ಮಾ. 24: ಕೊರೋನ ವೈರಸ್ ಪಿಡುಗಿನ ಹಿನ್ನೆಲೆಯಲ್ಲಿ ಎಲ್ಲ ಸ್ಯಾನಿಟೈಸರ್ ಗಳು ಮತ್ತು ವೆಂಟಿಲೇಟರ್‌ಗಳ ರಫ್ತನ್ನು ತಕ್ಷಣದಿಂದಲೇ ನಿಷೇಧಿಸಿ ಸರಕಾರವು ಮಂಗಳವಾರ ಆದೇಶಿಸಿದೆ.

 ಎಲ್ಲ ವಿಧಗಳ ಸ್ಯಾನಿಟೈಸರ್‌ಗಳು,ಯಾವುದೇ ಕೃತಕ ಉಸಿರಾಟ ಸಾಧನ ಅಥವಾ ಆಮ್ಲಜನಕ ಚಿಕಿತ್ಸಾ ಉಪಕರಣ ಅಥವಾ ಇತರ ಯಾವುದೇ ಉಸಿರಾಟ ಸಾಧನ ಸೇರಿದಂತೆ ಎಲ್ಲ ವಿಧಗಳ ವೆಂಟಿಲೇಟರ್‌ಗಳ ರಫ್ತನ್ನು ತಕ್ಷಣದಿಂದ ನಿಷೇಧಿಸಲಾಗಿದೆ ಎಂದು ವಿದೇಶ ವ್ಯಾಪಾರ ಮಹಾ ನಿರ್ದೇಶನಾಲಯವು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸರಕಾರವು ಕಳೆದ ವಾರ ಕೆಲವು ನಿರ್ದಿಷ್ಟ ವೆಂಟಿಲೇಟರ್‌ಗಳು,ಸರ್ಜಿಕಲ್ ಮತ್ತು ಡಿಸ್ಪೋಸೇಬಲ್ ಮಾಸ್ಕ್‌ಗಳು ಹಾಗೂ ಮಾಸ್ಕ್‌ಗಳ ತಯಾರಿಕೆಗೆ ಬಳಸುವ ಕಚ್ಚಾ ಜವಳಿ ಸಾಮಗ್ರಿಗಳ ರಫ್ತನ್ನು ನಿಷೇಧಿಸಿತ್ತು.

ಕೊರೋನವೈರಸ್ ಭೀತಿಯಿಂದಾಗಿ ಜನರು ಖರೀದಿಗೆ ಮುಗಿಬಿದ್ದಿರುವುದರಿಂದ ಮಾರುಕಟ್ಟೆಯಲ್ಲಿ ಹ್ಯಾಂಡ್ ಸ್ಯಾನಿಟೈಸರ್‌ಗಳು ಮತ್ತು ಮುಖಗವುಸುಗಳ ಕೊರತೆ ಯುಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News