ಹೊರಗೆ ಹೋಗಲೇ ಬೇಡಿ ಎಂಬ ಪ್ರಧಾನಿ ಸೂಚನೆ ಬೆನ್ನಿಗೆ ಆದಿತ್ಯನಾಥ್ ರಿಂದ ದೇವಾಲಯ ಭೇಟಿ

Update: 2020-03-25 06:34 GMT
Photo: Twitter(@myogiadityanath)

ಲಕ್ನೋ: ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಿದ ನಂತರವೂ ಇಂದು ಮುಂಜಾನೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಅಯ್ಯೋಧ್ಯೆಯಲ್ಲಿ ರಾಮ ಜನ್ಮಭೂಮಿಯ ಟಿನ್ ಶೆಡ್‍ನಲ್ಲಿದ್ದ ರಾಮನ ಮೂರ್ತಿಯನ್ನು ಫೈಬರ್‍ನಿಂದ ನಿರ್ಮಿತ ತಾತ್ಕಾಲಿಕ ನಿರ್ಮಾಣಕ್ಕೆ ಸ್ಥಳಾಂತರಿಸುವ ಧಾರ್ಮಿಕ ಪ್ರಕ್ರಿಯೆಯಲ್ಲಿ ಪ್ರಾತಃಕಾಲ ಪಾಲ್ಗೊಂಡರು. ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಗೊಳ್ಳುವ ತನಕ ರಾಮನ ಮೂರ್ತಿ ತಾತ್ಕಾಲಿಕ ಕಟ್ಟೋಣದಲ್ಲಿರಲಿದೆ.

ಮಂಗಳವಾರ ತಡರಾತ್ರಿ ಅಯ್ಯೋಧ್ಯೆಗೆ ಆಗಮಿಸಿದ ಮುಖ್ಯಮಂತ್ರಿ, ನವರಾತ್ರಿಯ ಮೊದಲ ದಿನದ ಈ ಪ್ರಕ್ರಿಯೆಯು ಅಯ್ಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಮೊದಲ ಹಂತ ಎಂದು ವಿವರಿಸಿ ಟ್ವೀಟ್ ಮಾಡಿದರು.

ಕೊರೋನ ವೈರಸ್ ಸೋಂಕು ಹರಡುವಿಕೆಯ ಭೀತಿಯಿಂದ ಇಂದಿನ ಕಾರ್ಯಕ್ರಮವನ್ನು ಮುಂದೂಡಲಾಗುವುದು ಎಂದು ತಿಳಿಯಲಾಗಿತ್ತಾದರೂ ಮುಖ್ಯಮಂತ್ರಿ ಮಾತ್ರ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ತರುವ ಗೋಜಿಗೆ ಹೋಗಿಲ್ಲ. ಕನಿಷ್ಠ 20 ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮುಖ್ಯಮಂತ್ರಿ ಜತೆಗೆ ಅಯ್ಯೋಧ್ಯೆಯ ಹಲವು ಪ್ರಮುಖ ಸಂತರು, ಹಿರಿಯ ಸರಕಾರಿ ಅಧಿಕಾರಿಗಳು ಅಯ್ಯೋಧ್ಯೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಪೊಲೀಸ್ ಮುಖ್ಯಸ್ಥರೂ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News