ನಮಗಾಗಿ, ನಮ್ಮನ್ನು ನಂಬಿದವರ ಭವಿಷ್ಯಕ್ಕಾಗಿ ಕೊರೋನ ವೈರಸ್ ಹರಡುವುದನ್ನು ನಿಯಂತ್ರಿಸಬೇಕಿದೆ: ಚಂದ್ರಶೇಖರ ಸ್ವಾಮೀಜಿ

Update: 2020-03-26 10:13 GMT

ಕೊರೋನ ವೈರಸ್ ವಿಶ್ವವನ್ನೇ ಕಾಡುತ್ತಿದೆ. ದಿನದಿಂದ ದಿನಕ್ಕೆ ವೈರಸ್ ತನ್ನ ಬಾಹುವನ್ನು ವಿಸ್ತರಿಸಿಕೊಳ್ಳುತ್ತಿದೆ. ವೈರಸ್ ನಿಯಂತ್ರಣಕ್ಕೆ ಔಷಧ ಕಂಡುಹಿಡಿಯಲು ಸಂಶೋಧನೆ ನಡೆಯುತ್ತಿದ್ದು, ನಮಗಾಗಿ ಮತ್ತು ನಮ್ಮನ್ನು ನಂಬಿದವರ ಭವಿಷ್ಯಕ್ಕಾಗಿ ನಾವು ವೈರಸ್ ಹರಡುವುದನ್ನು ನಿಯಂತ್ರಿಸಬೇಕಿದೆ. ವೈರಸ್ ಹರಡುವುದನ್ನು ತಡೆಯಲು ಮುಂದಿನ 21 ದಿನಗಳ ನಮ್ಮ ಚಟುವಟಿಕೆಗೆ ಸ್ವಯಂ ನಿಯಂತ್ರಣ ಹೇರಿ. ನಮ್ಮ ನಡುವೆ ಅಂತರ ಇಟ್ಟು ಬದುಕಬೇಕು ಎಂದು ಅಂತಾರಾಷ್ಟ್ರೀಯ ವಾಸ್ತು ತಜ್ಞ, ವೈಜ್ಞಾನಿಕ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಹೇಳಿದ್ದಾರೆ.

ದಿನ ಬೆಳಗಾದರೆ ಸ್ವಚ್ಛಂದ ಹಕ್ಕಿಯಂತೆ ಓಡಾಡಿಕೊಂಡು, ಬೇಕು ಬೇಡಗಳನ್ನು ತಿಂದುಕೊಂಡು, ಶಾಪಿಂಗ್ ಮಾಡಿಕೊಂಡು, ಪೂಜೆ - ಪುರಸ್ಕಾರ - ಮದುವೆ - ಔತಣ - ದೇವಸ್ಥಾನಗಳಲ್ಲಿ ಜಾತ್ರೆ - ಬ್ರಹ್ಮಕಲಶೋತ್ಸವ, ಚರ್ಚ್‌ನಲ್ಲಿ ಪ್ರಾರ್ಥನೆ, ಮಸೀದಿಯಲ್ಲಿ ನಮಾಝ್ ಮಾಡಿಕೊಂಡು ಹತ್ತು ಮಂದಿಯ ಬಳಿ ಹರಟೆ ಹೊಡೆದುಕೊಂಡು ಬದುಕಿದ್ದವರಿಗೆ ಏಕಾಏಕಿಯಾಗಿ ನಿಯಂತ್ರಣ ಹಾಕಿಕೊಳ್ಳಲು ಕಷ್ಟವಾಗಬಹುದು. ಆದರೆ ಅನಿವಾರ್ಯ ಸ್ಥಿತಿಯಲ್ಲಿ ನಾವಿದ್ದೇವೆ. ಕಷ್ಟವಾಗುತ್ತದೆ ಎಂದು ಓಡಾಡಿದರೆ ವೈರಸ್ ನಮಗೆ ಬಂದು ನಮ್ಮ ಬದುಕು ಕರಾಳವಾಗಬಹುದು.

ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಇಡೀ ಆಡಳಿತ ವ್ಯವಸ್ಥೆ ನಮ್ಮಲ್ಲಿ ಮನವಿ ಮಾಡುತ್ತಿದೆ. ಪೊಲೀಸ್ ಇಲಾಖೆ, ಅಧಿಕಾರಿಗಳು ಬೀದಿಗೆ ಬಂದು ಮನವಿ ಮಾಡುತ್ತಿದ್ದಾರೆ. ಮಾಧ್ಯಮದವರು ದಿನದ 24 ಗಂಟೆಯೂ ನಿರ್ಬಂಧ ಹಾಕಿಕೊಳ್ಳಿ ಎಂದು ಬೇಡುತ್ತಿದ್ದಾರೆ. ಆದರೆ ಕೆಲವೊಂದು ಮಂದಿಗೆ ಈ ಮನವಿಗಳು ಕೇಳುತ್ತಿಲ್ಲ. ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳು ಕೊನೆಗೆ ದಂಡಂ ದಶಗುಣಂ ಎಂಬಂತೆ ಸಹನೆ ಕಳೆದುಕೊಂಡು ಕೈಯಲ್ಲಿ ಬೆತ್ತ ಹಿಡಿದು ಥಳಿಸುತ್ತಿದ್ದಾರೆ.

ಸಹೋದರ, ಸಹೋದರಿಯರೆ ನಮ್ಮ ಬದುಕು ನಮ್ಮ ಕೈಯಲ್ಲಿದೆ. ನಮ್ಮ ಬದುಕನ್ನು ಕೊರೋನ ವೈರಸ್‌ನ ಕೈಗೆ ಕೊಡುವುದು ಬೇಡ. ದಯವಿಟ್ಟು ವೈರಸ್ ಹರಡದಂತೆ ತಡೆವುದು ನಮ್ಮೆಲ್ಲರ ಜವಾಬ್ದಾರಿ. ಕೇವಲ ಸರಕಾರ ಅಥವಾ ಆಡಳಿತ ಯಂತ್ರದಿಂದ ಏನೂ ಸಾಧ್ಯವಿಲ್ಲ.
ವೈರಸ್ಸನ್ನು ತಡೆಯುವ ದೊಡ್ಡಮಟ್ಟದ ಪ್ರಯತ್ನ ಮಾಡುತ್ತಿರುವಾಗ, ನಮ್ಮೆಲ್ಲರ ಆತ್ಮವಿಶ್ವಾಸ ಉಚ್ಚ ಮಟ್ಟದಲ್ಲಿರುವುದು ಅತ್ಯಗತ್ಯ.
ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಸಂಕಷ್ಟಕ್ಕೂ ಪರಿಹಾರವಿದೆ, ಪ್ರತಿಯೊಂದು ಪರಿಹಾರಕ್ಕೂ ಅದರದ್ದೇ ಆದ ಸೌಂದರ್ಯವಿದೆ. ಇಂತಹ ಮಹಾಮಾರಿಯ ವಿರುದ್ಧ ಹೋರಾಡುವ ಈ ಸಮಯದಲ್ಲಿ ಮೃತ್ಯುವನ್ನು ಆದಷ್ಟೂ ದೂರವಿಡಲು ಹಾಗೂ ಮೃತ್ಯುವಿನ ವಿರುದ್ಧ ಹೋರಾಡಲು ಬೇಕಾದ ಶಕ್ತಿಕೊಡಬಹುದಾದ ಪರಿಹಾರವೆಂದರೆ ಮನಸ್ಸು. ನಾವು ಮನಸ್ಸು ಮಾಡಬೇಕು.

ಸಹೋದರ, ಸಹೋದರಿಯರೆ ಮನೆಯೊಳಗೇ ಇರುವ ಈ ಸದವಕಾಶವನ್ನು ಉಪಯೋಗಿಸಿಕೊಳ್ಳಿ, ಹೊಸ ಪ್ರಪಂಚಕ್ಕೆ ತಮ್ಮನ್ನು ತೆರೆದುಕೊಳ್ಳಿ, ನಿತ್ಯ ಬದುಕಿನ ಜಂಜಾಟದಿಂದ ಅಲ್ಪ ಮುಕ್ತಿ ಎಂಬ ಭಾವನೆಯನ್ನು ಮನಸ್ಸಿನಲ್ಲಿ ಮೂಡಿಸಿಕೊಳ್ಳಿ. ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸಿ. ನಮ್ಮ ನಿತ್ಯ ಬದುಕಿನಲ್ಲಿ ಅಲ್ಪ ಬದಲಾವಣೆ ಮಾಡಿಕೊಳ್ಳಿ. ದಿನದ 24 ಗಂಟೆಯೂ ಸಾವು ನೋವಿನ ಬಗ್ಗೆ ಕೇಳುವ ಬದಲು ಅಲ್ಪ ಹೊತ್ತು ಮನಸ್ಸಿನ ಆರೋಗ್ಯಕ್ಕೆ ಪೂರಕವಾದ ಧ್ಯಾನ, ಉಪಾಸನೆ, ಯೋಗ, ಪ್ರಾಣಾಯಾಮ ಮಾಡಿ. ಒಳ್ಳೆಯ ಪುಸ್ತಕಗಳನ್ನು ಓದಿ. ಸಾಧ್ಯವಾದರೆ ಮಂತ್ರಗಳನ್ನು ಪಠಣ ಮಾಡಿ. ಮಂತ್ರ ಪಠಣ ಬಾರದಿದ್ದರೆ ಪಠಣವನ್ನು ಕೇಳಿ. ಮಂತ್ರದಿಂದ ಲಾಭ ಇದೆಯೇ ಎಂದು ನೀವು ಪ್ರಶ್ನೆ ಮಾಡಬಹುದು. ಆದರೆ ನಷ್ಟವಂತೂ ಇಲ್ಲ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ.

ಪೊಲೀಸ್ ಇಲಾಖೆ, ಆಡಳಿತ ಯಂತ್ರ, ಆಸ್ಪತ್ರೆಯಲ್ಲಿನ ವೈದ್ಯರು, ಸಿಬ್ಬಂದಿಗಳು, ಸಮಾಜವನ್ನು ಸ್ವಚ್ಛ ಮಾಡುವ ಕರ್ಮಚಾರಿಗಳು, ಸಂಶೋಧಕರು ಹೀಗೆ ನಾನಾ ಸಮುದಾಯದವರು ನಮ್ಮ ಆರೋಗ್ಯಕ್ಕಾಗಿ ಅವರ ಆರೋಗ್ಯವನ್ನು ಲೆಕ್ಕಿಸದೆ ದುಡಿಯುತ್ತಿದ್ದಾರೆ. ಮುಂಜಾಗರೂಕತಾ ಸಾಮಗ್ರಿಗಳು ಇಲ್ಲದೆ ಪೊಲೀಸ್ ಇಲಾಖೆ ರಸ್ತೆಯ ಬೀದಿ ಬೀದಿಗಳಲ್ಲಿ ಓಡಾಡುತ್ತಿದ್ದಾರೆ. ದಿನಸಿ ಅಂಗಡಿ ಮಾಲಕರು ಆಹಾರ ಪೂರೈಸುತ್ತಿದ್ದಾರೆ. ಹಾಲಿನ ಅಂಗಡಿಯವರು ಹಾಲು ಪೂರೈಸುತ್ತಿದ್ದಾರೆ. ಬೆಳಗ್ಗೆ ಪತ್ರಿಕೆ ಹಾಕುವ ಹುಡುಗ ಮನೆಗೆ ಪತ್ರಿಕೆ ತಂದು ಹಾಕುತ್ತಾನೆ. ಅವರ ಬಗ್ಗೆ ಯೋಚಿಸಿ, ಅವರ ಕುಟುಂಬದ ಸದಸ್ಯರ ಬಗ್ಗೆ ಯೋಚಿಸಿ ಮಿತ್ರರೆ, ಆದುದರಿಂದ ಎರಡೂ ಕೈ ಮುಗಿದು ನಾನೂ ನಿಮ್ಮಲ್ಲಿ ವಿನಂತಿ ಮಾಡುತ್ತೇನೆ. ಸರಕಾರದ ಆದೇಶ ಪಾಲನೆ ಮಾಡಿ. ಜವಾಬ್ದಾರಿಯುತ ನಾಗರಿಕರಂತೆ ಮುಂದಿನ 21 ದಿನ ಬದುಕೋಣ. ವೈರಸ್ ವಿರುದ್ಧ ಹೋರಾಡುವ ಶಪಥ ಮಾಡೋಣ. ಸಾಧ್ಯವಾದರೆ ವೈರಸ್ ಬಗ್ಗೆ ಲಘುವಾಗಿ ಮಾತನಾಡುವ ನಾಲ್ಕು ಮಂದಿಗೆ ತಿಳಿ ಹೇಳೋಣ ಎಂದು ಚಂದ್ರಶೇಖರ ಸ್ವಾಮೀಜಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News