ಅಸ್ಸಾಂ ದಿಗ್ಬಂಧನ ಕೇಂದ್ರದಲ್ಲಿರುವ ‘ಘೋಷಿತ’ ವಿದೇಶಿಯರ ಬಿಡುಗಡೆಗೆ ಸಿಜೆಐಗೆ ಮೊರೆ

Update: 2020-03-26 17:55 GMT
ಸಾಂದರ್ಭಿಕ ಚಿತ್ರ (Photo: PTI)

ಹೊಸದಿಲ್ಲಿ, ಮಾ. 26: ಕೊರೋನವೈರಸ್ ಸಾಂಕ್ರಾಮಿಕ ಪಿಡುಗು ಹೆಚ್ಚುತ್ತಿರುವ ನಡುವೆಯೇ ಅಸ್ಸಾಮಿನಲ್ಲಿ ವಿದೇಶಿಯರು ಎಂದು ಘೋಷಿಲ್ಪಟ್ಟಿರುವ ಎಲ್ಲರನ್ನೂ ರಾಜ್ಯದಲ್ಲಿಯ ಆರು ದಿಗ್ಬಂಧನ ಕೇಂದ್ರಗಳಿಂದ ಬಿಡುಗಡೆಗೊಳಿಸುವಂತೆ ಕೋರಿ ಎನ್‌ಜಿಒ ‘ಜಸ್ಟೀಸ್ ಆ್ಯಂಡ್ ಲಿಬರ್ಟಿ ಇನಿಷಿಯೇಟಿವ್’ ಭಾರತದ ಮುಖ್ಯ ನ್ಯಾಯಾಧೀಶ ಎಸ್.ಎ.ಬೊಬ್ಡೆ ಅವರಿಗೆ ಅರ್ಜಿಯನ್ನು ಸಲ್ಲಿಸಿದೆ.

ಈ ಎನ್‌ಜಿಒ ಅಸ್ಸಾಮಿನಲ್ಲಿ ಎನ್‌ಆರ್‌ಸಿ ಸಂದರ್ಭ ತಮ್ಮ ಪೌರತ್ವವನ್ನು ಸಾಬೀತುಗೊಳಿಸಲು ಸಾಧ್ಯವಾಗದವರಿಗೆ ಕಾನೂನು ನೆರವನ್ನು ಒದಗಿಸುತ್ತಿದೆ.

ಸಂವಿಧಾನದ 21ನೇ ವಿಧಿಯನ್ನು ಉಲ್ಲೇಖಿಸಿರುವ ಅದು, ದಿಗ್ಬಂಧನ ಕೇಂದ್ರಗಳಲ್ಲಿ ಇರಿಸಲಾಗಿರುವವರನ್ನು ವಿದೇಶಿಯರು ಎಂದು ಪರಿಗಣಿಸಲಾಗಿದ್ದರೂ ಅವರು ಮಾನವಜೀವಿಗಳಾಗಿದ್ದಾರೆ. ಅವರು ಬದುಕುವ ಹಕ್ಕನ್ನು ಹೊಂದಿದ್ದಾರೆಯೇ ಹೊರತು ಕೊರೋನವೈರಸ್‌ನಿಂದ ಸಾಯುವುದಲ್ಲ ಎಂದು ಹೇಳಿದೆ. ಈ ದಿಗ್ಬಂಧನ ಕೇಂದ್ರಗಳಲ್ಲಿಯ ಶೋಚನೀಯ ವಾಸಸ್ಥಿತಿಗಳನ್ನು ಪ್ರಮುಖವಾಗಿ ಬಿಂಬಿಸಿರುವ ಅದು,ದಿಗ್ಬಂಧನದಲ್ಲಿರುವವರ ಪೈಕಿ ಹೆಚ್ಚಿನವರು ವೃದ್ಧರು ಮತ್ತು ಅನಾರೋಗ್ಯಪೀಡಿತರಾಗಿದ್ದಾರೆ ಎಂದು ಬೆಟ್ಟು ಮಾಡಿದೆ.

ಅಸ್ಸಾಮಿನ ಆರು ಕೇಂದ್ರಗಳಲ್ಲಿ ಒಟ್ಟು 802 ಜನರಿದ್ದಾರೆ ಮತ್ತು ಮಾರ್ಚ್ 2019 ಮತ್ತು ಫೆಬ್ರವರಿ 2020ರ ನಡುವೆ 10 ಜನರು ಮೃತಪಟ್ಟಿದ್ದಾರೆ ಎಂದು ಮಾ.11ರಂದು ಕೇಂದ್ರ ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ಅವರು ರಾಜ್ಯಸಭೆಯಲ್ಲಿ ನೀಡಿದ್ದ ಹೇಳಿಕೆಯನ್ನು ತನ್ನ ಅರ್ಜಿಯಲ್ಲಿ ಉಲ್ಲೇಖಿಸಿರುವ ಎನ್‌ಜಿಒ, ಕೊರೋನವೈರಸ್ ಪಿಡುಗಿನ ಹಿನ್ನೆಲೆಯಲ್ಲಿ ಈಗಾಗಲೇ ಕಿಕ್ಕಿರಿದು ತುಂಬಿರುವ ದಿಗ್ಬಂಧನ ಕೇಂದ್ರಗಳಲ್ಲಿರುವವರು ಸುಲಭವಾಗಿ ಸೋಂಕಿಗೆ ತುತ್ತಾಗುವ ಅಪಾಯವಿದೆ ಎಂದು ಕಳವಳವನ್ನು ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News