‘ಮುಸ್ಲಿಮೇತರ ವಿದ್ಯಾರ್ಥಿಗಳು ಅನುತ್ತೀರ್ಣ’ ಎಂದ ಜಾಮಿಯಾ ಪ್ರೊಫೆಸರ್ ಅಮನಾತು

Update: 2020-03-26 18:15 GMT

ಹೊಸದಿಲ್ಲಿ, ಮಾ. 26: ಸಿಎಎ ವಿರುದ್ಧ ಪ್ರತಿಭಟನೆಯನ್ನು ಬೆಂಬಲಿಸದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಎಂದು ಟ್ವೀಟಿಸುವ ಮೂಲಕ ದಿಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಬೋಧಕರೋರ್ವರು ಭಾರೀ ವಿವಾದವನ್ನು ಸೃಷ್ಟಿಸಿದ್ದಾರೆ. ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಮತ್ತು ವಿಚಾರಣೆಗೆ ಆದೇಶಿಸಲಾಗಿದೆ ಎಂದು ವಿವಿಯು ಬುಧವಾರ ಪ್ರಕಟಿಸಿದೆ.

ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್ ಆಗಿರುವ ಅಬ್ರಾರ್ ಅಹ್ಮದ್ ಅವರು 15 ಮುಸ್ಲಿಮೇತರ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಎಲ್ಲರೂ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾರೆ.ಈ ಮುಸ್ಲಿಮೇತರ ವಿದ್ಯಾರ್ಥಿಗಳು ಸಿಎಎ ವಿರೋಧಿ ಪ್ರತಿಭಟನೆಯನ್ನು ಬೆಂಬಲಿಸಿರಲಿಲ್ಲ ಎಂದು ಟ್ವೀಟಿಸಿರುವುದನ್ನು ವಿವಿಯ ಕುಲಸಚಿವ ಎ.ಪಿ.ಸಿದ್ದಿಕಿ ಅವರು ತನ್ನ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಈ ಟ್ವೀಟ್ ಕೋಮು ಭಾವನೆಯನ್ನು ಪ್ರಚೋದಿಸಿದೆ ಮತ್ತು ಅಹ್ಮದ್ ಅವರ ಈ ವರ್ತನೆ ಸರಿಯಲ್ಲ,ಅದು ನೀತಿ ಸಂಹಿತೆಗೆ ವಿರುದ್ಧವಾಗಿದೆ ಎಂದು ಹೇಳಿರುವ ವಿವಿ ಅಧಿಕಾರಿಗಳು,ಟ್ವೀಟ್‌ನ್ನು ಗಂಭೀರ ದುರ್ವರ್ತನೆಯ ಪ್ರಕರಣ ಎಂದು ವರ್ಗೀಕರಿಸಿದ್ದಾರೆ.

 ತನ್ನ ಟ್ವೀಟ್‌ನ್ನು ತಪ್ಪಾಗಿ ಅರ್ಥೈಸಲಾಗಿದೆ,ಅದು ಕೇವಲ ವಿಡಂಬನೆಯಾಗಿತ್ತೇ ಹೊರತು ವಾಸ್ತವಿಕ ಪ್ರತಿಪಾದನೆಯಾಗಿರಲಿಲ್ಲ ಎಂದು ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿರುವ ಅಹ್ಮದ್,ಅದು ಸಿಎಎ ಹೇಗೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡಿದೆ ಎನ್ನುವುದನ್ನು ವಿವರಿಸಿರುವ ವಿಡಂಬನೆಯಾಗಿತ್ತು ಮತ್ತು ಯಾವುದೇ ಪರೀಕ್ಷೆಗಳು ನಡೆದಿರಲಿಲ್ಲವಾದ್ದರಿಂದ ತಾನು ಯಾರನ್ನಾದರೂ ಅನುತ್ತೀರ್ಣಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ವಾದಿಸಿದ್ದಾರೆ.

ತನ್ನ 10 ವರ್ಷಗಳ ವೃತ್ತಿಜೀವನದಲ್ಲಿ ತನ್ನ ವಿರುದ್ಧ ತಾರತಮ್ಯದ ಒಂದೇ ಒಂದು ಪ್ರಕರಣವಿಲ್ಲ ಎಂದಿರುವ ಅವರು,ಟ್ವಿಟರ್‌ನಲ್ಲಿ ಅಕ್ಷರಗಳ ಮಿತಿಯಿರುವುದು ಇಂತಹ ತಪ್ಪು ವ್ಯಾಖ್ಯಾನಕ್ಕೆ ಕಾರಣವಾಗಿರಬಹುದು ಎಂದಿದ್ದಾರೆ.

ಈ ವಿಷಯದಲ್ಲಿ ವಿಚಾರಣೆಗೆ ವಿವಿಯು ಆದೇಶಿಸಿರುವದರಿಂದ ಶೀಘ್ರವೇ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News