ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಉತ್ತರ ಪ್ರದೇಶಕ್ಕೆ ತೆರಳಿದ ಐಎಎಸ್ ಅಧಿಕಾರಿ

Update: 2020-03-27 08:40 GMT

ತಿರುವನಂತಪುರಂ: ಸಿಂಗಾಪುರದಿಂದ ಕಳೆದ ಗುರುವಾರ ವಾಪಸಾಗಿದ್ದ ಕೇರಳದ ಕೊಲ್ಲಂ ಜಿಲ್ಲೆಯ ಸಬ್-ಕಲೆಕ್ಟರ್ ಅನುಪಮ್ ಮಿಶ್ರಾ ಅವರಿಗೆ ನಿಯಮದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನ್‍ ನಲ್ಲಿರುವಂತೆ ಸೂಚಿಸಲಾಗಿದ್ದರೂ ಅವರು  ನಿಯಮವನ್ನು ಉಲ್ಲಂಘಿಸಿ ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ತಮ್ಮ ಮನೆಗೆ ತೆರಳಿರುವ ಪ್ರಕರಣ ಬೆಳಕಿಗೆ ಬಂದಿದೆ.

ವಿವಾಹದ ನಂತರ ರಜೆಯ ಮೇಲೆ ತೆರಳಿದ್ದ ಅವರು ನಂತರ ಮಲೇಷ್ಯಾ ಮತ್ತು ಸಿಂಗಾಪುರ ಪ್ರಯಾಣಕ್ಕೆ ಅನುಮತಿ ಪಡೆದು ತೆರಳಿದ್ದರು.

"ಮಾರ್ಚ್ 19ರಂದು ಕರ್ತವ್ಯಕ್ಕೆ ಹಾಜರಾಗಲು ಕೊಲ್ಲಂಗೆ ವಾಪಸಾದ ಅವರನ್ನು ಮನೆಯಲ್ಲಿಯೇ ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನ್‍ ನಲ್ಲಿರುವಂತೆ ಸೂಚಿಸಲಾಗಿತ್ತು. ಆದರೆ ಗುರುವಾರ ಅವರು ಕೊಲ್ಲಂನಲ್ಲಿಲ್ಲ ಎಂದು ತಿಳಿದು ಬಂದಿತ್ತು. ಅವರು ತಾವು ವಾಪಸಾದ ಮಾರ್ಚ್ 19ರಂದೇ ಕೊಲ್ಲಂ ಬಿಟ್ಟು ಕಾನ್ಪುರಕ್ಕೆ ತೆರಳಿದ್ದರು ಎಂದು ನಂತರ ತಿಳಿದು ಬಂತು'' ಎಂದು ಕೊಲ್ಲಂ ಕಲೆಕ್ಟರ್ ಬಿ ಅಬ್ದುಲ್ ನಾಸಿರ್ ಹೇಳಿದ್ದಾರೆ.

ಕೇರಳ ಸರಕಾರ ಈ ಕುರಿತು ವಿವರಣೆ ಕೇಳಿದ ನಂತರ ಕೊಲ್ಲಂ ಕಲೆಕ್ಟರ್ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.

"ಅವರು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು'' ಎಂದು ರಾಜ್ಯ ಸಚಿವೆ ಜೆ ಮರ್ಸಿಕಟ್ಟಿ ಅಮ್ಮ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News