ವಲಸಿಗ ಕಾರ್ಮಿಕರ ದಾರುಣ ಸ್ಥಿತಿಗೆ ಮೋದಿ ಸರಕಾರ ಹೊಣೆ: ರಾಹುಲ್ ಆರೋಪ

Update: 2020-03-28 17:59 GMT

ಹೊಸದಿಲ್ಲಿ, ಮಾ. 28: ಕೊರೋನ ವೈರಸ್ ರುದ್ರತಾಂಡವದ ಹಿನ್ನೆಲೆಯಲ್ಲಿ ದೇಶಾದ್ಯಂತ ಹೇರಲಾಗಿರುವ ಲಾಕ್‌ಡೌನ್‌ನಿಂದಾಗಿ ದುಡಿಮೆಯಿಲ್ಲದೆ ತಮ್ಮ ಹಳ್ಳಿಗಳಿಗೆ ವಾಪಾಸಾಗುತ್ತಿರುವ ಲಕ್ಷಾಂತರ ಮಂದಿ ಬಡಕಾರ್ಮಿಕರ ದಾರುಣ ಪರಿಸ್ಥಿತಿಗೆ ಕೇಂದ್ರ ಸರಕಾರ ಹೊಣೆಗಾರನೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪಾದಿಸಿದ್ದಾರೆ.

ಪ್ರಸಕ್ತ ಪರಿಸ್ಥಿತಿ ಭೀಕರವಾದ ದುರಂತವಾಗಿ ಪರಿಣಮಿಸದೆ ಇರಲು ದೃಢವಾದ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಮೋದಿ ಸರಕಾರವನ್ನು ಆಗ್ರಹಿಸಿದ್ದಾರೆ.

 ಉದ್ಯೋಗವಿಲ್ಲದೆ ಪರದಾಡುತ್ತಿರುವ ವಲಸಿಗ ಕಾರ್ಮಿಕರಿಗೆ ಆಹಾರ ಹಾಗೂ ವಸತಿಯನ್ನು ಒದಗಿಸಲು ನೆರವಾಗುವಂತೆ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ‘‘ ಈ ಘೋರ ಪರಿಸ್ಥಿತಿಗೆ ಕೇಂದ್ರ ಸರಕಾರವೇ ಜವಾಬ್ದಾರನಾಗಿದೆ. ಜನರನ್ನು ಇಂತಹ ಪರಿಸ್ಥಿತಿಗೆ ತಂದಿರುವುದು ಅದು ಎಸಗಿರುವ ದೊಡ್ಡ ಅಪರಾಧವಾಗಿದೆ ’’ ಎಂದು ರಾಹುಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ‘‘ಹಸಿದ,ಬಾಯಾರಿರುವ ನಮ್ಮ ನೂರಾರು ಸಹೋದರರು ಹಾಗೂ ಸಹೋದರಿಯರು ತಮ್ಮ ಕುಟುಂಬಗಳವರ ಜೊತೆ ತಮ್ಮ ಹಳ್ಳಿಗಳೆಡೆಗೆ ನಡೆದುಕೊಂಡು ಹೋಗುತ್ತಿದ್ದಾರೆ” ಎಂದವರು ಹೇಳಿದರು.

 “ನಿಮಗೆ ಸಾಧ್ಯವಿದ್ದಲ್ಲಿ ಪ್ರಯಾಸಕಾರಿ ಪ್ರಯಾಣದ ಸಂದರ್ಭದಲ್ಲಿ ಅವರಿಗೆ ಆಹಾರ, ನೀರು, ಆಶ್ರಯ ಒದಗಿಸುವಂತೆ ನಾನು ಎಲ್ಲರಿಗೂ, ಅದರಲ್ಲಿ ವಿಶೇಷವಾಗಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರಲ್ಲಿ ಮನವಿ ಮಾಡುತ್ತೇನೆ. ಜೈಹಿಂದ್” ಎಂದು ಗಾಂಧಿ ಟ್ವೀಟಿಸಿದ್ದಾರೆ.

‘‘ವಿದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲು ಸರಕಾರಕ್ಕೆ ವಿಮಾನಗಳನ್ನು ಕಳುಹಿಸಲು ಸಾಧ್ಯವಿರುವುದಾದರೆ, ಅದು ಯಾಕೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಲು ಸಾರಿಗೆಯನ್ನು ಒದಗಿಸುತ್ತಿಲ್ಲ’’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಹೇಳಿದ್ದಾರೆ.

‘‘ಒಂದು ದೇಶವಾಗಿ ನಾವು ಸಾವಿರಾರು ವಲಸಿಗ ಕಾರ್ಮಿಕರನ್ನು ಅವರ ಪಾಡಿಗೆ ಬಿಟ್ಟುಬಿಡಲು ಹೇಗೆ ಸಾಧ್ಯ?. ಸಾವಿರಾರು ಪುರುಷರು, ಮಹಿಳೆಯರು ಹಾಗೂ ಮಕ್ಕಳು ಕಾಲ್ನಡಿಗೆಯಲ್ಲಿ. ಪೂರ್ವ ಉತ್ತರಪ್ರದೇಶ ಹಾಗೂ ಬಿಹಾರದೆಡೆಗೆ ನಡೆದುಕೊಂಡೇ ಹೋಗುತ್ತಿದ್ದಾರೆ’’ ಎಂದು ಆಕೆ ತಿಳಿಸಿದರು.

‘‘ಯುರೋಪ್‌ನಿಂದ ನಾಗರಿಕರನ್ನು ಕರೆತರಲು ನಾವು ವಿಮಾನಗಳನ್ನು ಕಳುಹಿಸಿದ್ದೇವೆ. ಆದರೆ ನಮ್ಮೊಂದಿಗಿರುವ ಕಡುಬಡವರು ಹಾಗೂ ದುರ್ಬಲರನ್ನು ಸಾಗಿಸಲು ನಾವು ಯಾಕೆ ಸಾರಿಗೆ ವ್ಯವಸ್ಥೆಯನ್ನು ಸಂಘಟಿಸುತ್ತಿಲ್ಲ’’ ಎಂದವರು ಪ್ರಶ್ನಿಸಿದ್ದಾರೆ.

ಮೋದೀಜಿ ಹಾಗೂ ಅಮಿತ್‌ಶಾ ಜೀ ಅವರೇ, ದೇವರಿಗೋಸ್ಕರವಾದರೂ, ಜನರ ಪ್ರಾಣಗಳನ್ನು ರಕ್ಷಿಸಲು ನಿಮ್ಮಲ್ಲಿರುವ ಅಧಿಕಾರವನ್ನು ಬಳಸಿಕೊಳ್ಳಿ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News