ಮಗುವಿಗೆ ಜನ್ಮ ನೀಡುವ ಗಂಟೆಗಳ ಮೊದಲು ಕೊರೋನ ಕಿಟ್ ಅಭಿವೃದ್ಧಿಪಡಿಸಿದ ತಜ್ಞೆ

Update: 2020-03-28 19:20 GMT

ಹೊಸದಿಲ್ಲಿ, ಮಾ. 28: ಭಾರತದಲ್ಲಿ ಕೊರೋನವೈರಸ್ ಸೋಂಕು ಪೀಡಿತರನ್ನು ತಪಾಸಣೆಗೆ ಒಳಪಡಿಸುವ ವಿಧಾನವೇ ಕಳಪೆಯಾಗಿದೆ ಎಂಬ ಟೀಕೆ ಸಾಮಾನ್ಯವಾಗಿ ಕೇಳಿಬರುತ್ತಿದೆ. ಈಗ ಈ ಪರಿಸ್ಥಿತಿ ಬದಲಾವಣೆಯಾಗುವ ಹಂತದಲ್ಲಿದೆ. ವೈರಾಣು ತಜ್ಞೆಯೊಬ್ಬರು ನೂತನ ಪರೀಕ್ಷಾ ಕಿಟ್ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ, ಅದು ಕೂಡ ಮಗುವಿಗೆ ಜನ್ಮ ನೀಡುವ ಕೆಲವೇ ಗಂಟೆಗಳ ಮೊದಲು.

ಗುರುವಾರ ಮೊದಲ ಮೇಡ್-ಇನ್-ಇಂಡಿಯಾ ಕೊರೋನವೈರಸ್ ಪರೀಕ್ಷಾ ಕಿಟ್‌ಗಳು ಮಾರುಕಟ್ಟೆ ತಲುಪಿವೆ. ಇದು ಜ್ವರದ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳಲ್ಲಿ ಕೋವಿಡ್-19 ಸೋಂಕು ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸುವ ವೈದ್ಯರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಪುಣೆಯ ‘ಮೈಲ್ಯಾಬ್ ಡಿಸ್ಕವರಿ’ಯು ಪರೀಕ್ಷಾ ಕಿಟ್‌ಗಳನ್ನು ತಯಾರಿಸಿ ಮಾರಾಟ ಮಾಡಲು ಪೂರ್ಣ ಪ್ರಮಾಣದ ಅನುಮತಿ ಪಡೆದ ಮೊದಲ ಭಾರತೀಯ ಕಂಪೆನಿಯಾಗಿದೆ. ಅದು ಮೊದಲ ಹಂತದಲ್ಲಿ 150 ಕಿಟ್‌ಗಳನ್ನು ಪುಣೆ, ಮುಂಬೈ, ದಿಲ್ಲಿ, ಗೋವಾ ಮತ್ತು ಬೆಂಗಳೂರುಗಳಲ್ಲಿರುವ ಪ್ರಯೋಗಾಲಯಗಳಿಗೆ ಈ ವಾರ ಕಳುಹಿಸಿದೆ.

‘‘ನಮ್ಮ ನಿರ್ಮಾಣ ಘಟಕ ವಾರಾಂತ್ಯದಲ್ಲೂ ಕೆಲಸ ಮಾಡುತ್ತಿದೆ ಹಾಗೂ ಮುಂದಿನ ಹಂತದ ಕಿಟ್‌ಗಳನ್ನು ಸೋಮವಾರ ಕಳುಹಿಸಲಾಗುವುದು’’ ಎಂದು ಮೈಲ್ಯಾಬ್‌ನ ವೈದ್ಯಕೀಯ ವ್ಯವಹಾರಗಳ ನಿರ್ದೇಶಕ ಡಾ. ಗೌತಮ್ ವಾಂಖೇಡೆ ಶುಕ್ರವಾರ ‘ಬಿಬಿಸಿ’ಗೆ ಹೇಳಿದರು.

ಪ್ರಯೋಗಾಲಯವು ಒಂದು ವಾರದಲ್ಲಿ ಒಂದು ಲಕ್ಷ ಕೋವಿಡ್-19 ಪರೀಕ್ಷಾ ಕಿಟ್‌ಗಳನ್ನು ಪೂರೈಸಬಲ್ಲದು ಹಾಗೂ ಅಗತ್ಯ ಬಿದ್ದರೆ 2 ಲಕ್ಷವರೆಗೆ ಕಿಟ್‌ಗಳನ್ನು ಉತ್ಪಾದಿಸಬಲ್ಲದು ಎಂದು ಅವರು ನುಡಿದರು.

ಪ್ರತಿ ಮೈಲ್ಯಾಬ್ ಕಿಟ್‌ನಿಂದ 100 ಮಾದರಿಗಳ ಪರೀಕ್ಷೆ ಮಾಡಬಹುದಾಗಿದೆ ಹಾಗೂ ಅದಕ್ಕೆ 1,200 ರೂಪಾಯಿ ತಗಲುತ್ತದೆ. ಇದು ವಿದೇಶದಿಂದ ಕೋವಿಡ್-19 ಪರೀಕ್ಷಾ ಕಿಟ್‌ಗಳನ್ನು ಆಮದು ಮಾಡಲು ತಗಲುವ 4,500 ರೂಪಾಯಿಯ ಕಾಲು ಭಾಗದಷ್ಟಾಗಿದೆ.

ಕಿಟ್ಟನ್ನು ಅಭಿವೃದ್ಧಿಪಡಿಸಿದ ಮೈಲ್ಯಾಬ್ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥೆ ಮಿನಾಲ್ ದಖಾವೆ ಭೋಸಲೆ ನೇತೃತ್ವದ ತಂಡವು 3-4 ತಿಂಗಳ ಬದಲು ಆರು ವಾರಗಳ ದಾಖಲೆ ಅವಧಿಯಲ್ಲಿ ಅದನ್ನು ಅಭಿವೃದ್ಧಿಪಡಿಸಿದೆ.

ಈ ಯೋಜನೆಯಲ್ಲಿ ಕೆಲಸ ಮಾಡಲು ಭೋಸಲೆ ಫೆಬ್ರವರಿ ತಿಂಗಳಲ್ಲಷ್ಟೇ ಆರಂಭಿಸಿದರು. ಈ ನಡುವೆ ಕಳೆದ ವಾರ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News