ದೆಹಲಿ : ಕೊರೋನ ವೈರಸ್ ಸೋಂಕು ಪ್ರಕರಣಗಳಲ್ಲಿ ಹೆಚ್ಚಳ

Update: 2020-03-31 04:18 GMT

ಹೊಸದಿಲ್ಲಿ : ದೆಹಲಿಯ ನಿಝಾಮುದ್ದೀನ್ ಪಶ್ಚಿಮ ಪ್ರದೇಶದಲ್ಲಿ ದಿಢೀರನೆ ಕೊರೋನ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದು ಆರೋಗ್ಯ ಅಧಿಕಾರಿಗಳ ನಿದ್ದೆಗೆಡಿಸಿದೆ. 

ಇಲ್ಲಿನ ಜಮಾಅತ್ ಈ ತಿಂಗಳ ಆರಂಭದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವಿದೇಶಿಯರು ಹಾಗೂ ಭಾರತೀಯ ಅನುಯಾಯಿಗಳು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ತೆಲಂಗಾಣದ ಆರು ಮಂದಿ, ತಮಿಳುನಾಡು, ಕರ್ನಾಟಕ ಮತ್ತು ಜಮ್ಮು ಕಾಶ್ಮೀರದ ತಲಾ ಒಬ್ಬರು ರೋಗದಿಂದ ಮೃತಪಟ್ಟಿದ್ದಾರೆ. ಈ ಇಸ್ಲಾಮಿಕ್ ಮಿಷನರಿ ಚಳವಳಿಯ ಅನುಯಾಯಿಗಳಾದ 19 ಮಂದಿ ವಿದೇಶಿಯರಲ್ಲಿ ಕೊರೋನ ಸೋಂಕು ದೃಢಪಟ್ಟಿದ್ದು, ಫಿಲಿಪಿನೊ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ.

ಮಾರ್ಚ್ ಮೊದಲ ವಾರದಲ್ಲಿ ಜಮಾಅತ್ ಆಯೋಜಿಸಿದ್ದ ಸಮ್ಮೇಳನದಲ್ಲಿ ಭಾಗವಹಿಸಲು 250 ಮಂದಿ ವಿದೇಶಿಯರು ರಾಷ್ಟ್ರರಾಜಧಾನಿಗೆ ಆಗಮಿಸಿದ್ದರು. ಸಮ್ಮೇಳನದ ಬಳಿಕ ವಿವಿಧ ರಾಜ್ಯಗಳಿಗೆ ಇವರು ಭೇಟಿ ನೀಡಿದ್ದರು ಹಾಗೂ ಹಲವು ಮಂದಿ ಭಾರತೀಯ ಅನುಯಾಯಿಗಳು ಜತೆಗಿದ್ದರು.

ಮಸೀದಿಯ ಒಳಗೆ 1500ಕ್ಕೂ ಹೆಚ್ಚು ಮಂದಿ ಇನ್ನೂ ಇದ್ದಾರೆ ಎಂದು ಮೂಲಗಳು ಹೇಳಿದ್ದು, 300 ಮಂದಿಗೆ ಜ್ವರ, ಕಫ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಈ ಪ್ರದೇಶದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೊಳಿಸಿದ್ದರೂ, ಹಲವು ಮಂದಿ ದೆಹಲಿಯ ವಿವಿಧ ಸರ್ಕಾರಿ ಆಸ್ಪತ್ರೆಗಳ ಐಸೋಲೇಶನ್ ವಾರ್ಡ್‌ಗಳಲ್ಲಿ ದಾಖಲಾಗಿದ್ದಾರೆ. ಪೊಲೀಸರು, ಆರೋಗ್ಯಾಧಿಕಾರಿಗಳು ಮತ್ತು ಪಾಲಿಕೆ ಅಧಿಕಾರಿಗಳು ಇವರನ್ನು ಪತ್ತೆ ಮಾಡಿ ಸಾಂಕ್ರಾಮಿಕ ಹರಡುವುದನ್ನು ತಡೆಯುವ ಪ್ರಯತ್ನದಲ್ಲಿದ್ದಾರೆ.

ಜಮಾಅತ್‌ನ ಕೇಂದ್ರ ಕಚೇರಿ ಬಂಗ್ಲೆ ವಾಲಿ ಮಸೀದಿಯನ್ನು ಮುಚ್ಚಲಾಗಿದೆ. ಉಳಿದ ಎಲ್ಲ ಸದಸ್ಯರನ್ನು ಕೋವಿಡ್-19 ತಪಾಸಣೆಗೆ ಗುರಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News