ಸಿಕ್ಕಿಂನಲ್ಲಿ ಸಿಲುಕಿಕೊಂಡ ವಲಸೆ ಕಾರ್ಮಿಕರಿಗೆ ಭುಟಿಯಾ ಸಹಾಯಹಸ್ತ

Update: 2020-04-01 04:25 GMT

ಗ್ಯಾಂಗ್ಟಕ್, ಮಾ.31: ದೇಶಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ತಮ್ಮ ಮನೆಗೆ ವಾಪಸಾಗಲು ಸಾಧ್ಯವಾಗದೆ ಸಿಕ್ಕಿಂ ಗಡಿಭಾಗದಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರಿಗೆ ನೆಲೆಸಲು ಭಾರತದ ಮಾಜಿ ಫುಟ್ಬಾಲ್ ನಾಯಕ ಭೈಚುಂಗ್ ಭುಟಿಯಾ ತನ್ನದೇ ಒಡೆತನದ ಕಟ್ಟಡದ ಬಾಗಿಲು ತೆರೆದು ಮಾನವೀಯತೆ ಮೆರೆದಿದ್ದಾರೆ.

ರಾಜಕಾರಣಿಯಾಗಿ ಪರಿವರ್ತಿತರಾಗಿರುವ ಭುಟಿಯಾ ಸಮಸ್ಯೆಗೆ ಸಿಲುಕಿರುವ ಎಲ್ಲ ಕಾರ್ಮಿಕರಿಗೆ ತನ್ನ ತಂಡ ಯುನೈಟೆಡ್ ಸಿಕ್ಕಿಂ ಫುಟ್ಬಾಲ್ ಕ್ಲಬ್(ಯುಎಸ್‌ಎಫ್‌ಸಿ)ಮುಖಾಂತರ ಅಗತ್ಯದ ವಸ್ತುವನ್ನು ಒದಗಿಸುವ ಭರವಸೆ ನೀಡಿದ್ದಾರೆ.

‘‘ಲಾಕ್‌ಡೌನ್‌ನಿಂದಾಗಿ ದೇಶಾದ್ಯಂತ ಹೆಚ್ಚು ತೊಂದರೆಗೆ ಸಿಲುಕಿರುವುದು ವಲಸಿಗ ಕಾರ್ಮಿಕರು. ನೆರೆಯ ರಾಜ್ಯಗಳಾದ ಪಶ್ಚಿಮಬಂಗಾಳ ಹಾಗೂ ಬಿಹಾರದಿಂದ ವಲಸೆ ಬಂದಿರುವ ಸಾವಿರಾರು ಕಾರ್ಮಿಕರು ಮುಚ್ಚಲ್ಪಟ್ಟಿರುವ ರಾಜ್ಯದ ಗಡಿ ದಾಟಲಾಗದೆ ಸಿಕ್ಕಿಂನಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಜನರು ಕಳೆದ ಮೂರ್ನಾಲ್ಕು ದಿನಗಳಿಂದ ಸೂರಿಲ್ಲದೆ ರಸ್ತೆಗಳ ಬದಿ ವಾಸಿಸುತ್ತಿದ್ದಾರೆ. ವಲಸಿಗರು ನನ್ನ ಕಟ್ಟಡ ಕಟ್ಟಲೂ ಶ್ರಮಿಸಿದ್ದರು. ಕಾರ್ಮಿಕರಿಗೆ ಸಹಾಯ ಮಾಡುವುದಕ್ಕಾಗಿ ಕೆಲವು ದಿನಗಳ ಹಿಂದೆ ಸ್ಥಳೀಯ ಅಧಿಕಾರಿಗಳ ಬಳಿ ಮಾತನಾಡಿದ್ದೆ. ಕಾರ್ಮಿಕರಿಗೆ ಗಾಂತೋಕ್ ಸಮೀಪವಿರುವ ನನ್ನ ಒಡೆತನದ ನಾಲ್ಕು ಮಹಡಿಯ ಕಟ್ಟಡದಲ್ಲಿ ನೆಲೆಸಲು ಅನುಮತಿ ಕೋರಿದ್ದೆ. ನನ್ನ ಕಟ್ಟಡದಲ್ಲಿ ಸುಮಾರು ನೂರು ಮಂದಿ ನೆಲೆಸಬಹುದು. ಹೀಗಾಗಿ ಇದೊಂದು ಸವಾಲಿನ ಕೆಲಸವಾಗಿದೆ’’ ಎಂದು ಭುಟಿಯಾ ಹೇಳಿದ್ದಾರೆ. ‘‘ಕೊರೋನ ವೈರಸ್ ಹಾಗೂ ರಾಷ್ಟ್ರವ್ಯಾಪಿ ನಡೆಯುತ್ತಿರುವ ಲಾಕ್‌ಡೌನ್‌ನಿಂದ ಪಾರಾಗಿ ಕಾರ್ಮಿಕರೆಲ್ಲರೂ ತಮ್ಮ ಮನೆಯನ್ನು ಸೇರುವಂತಾಗಲಿ ಎಂದು ಹಾರೈಸುವೆ. ನಾನು ಲುಂಸೆ, ಟಾಡಾಂಗ್‌ನಲ್ಲಿ ನನ್ನ ಕಟ್ಟಡದಲ್ಲಿ ಕಾರ್ಮಿಕರಿಗೆ ನೆಲೆಸಲು ಅವಕಾಶ ನೀಡಿದ್ದೇನೆ. ಎಲ್ಲ ಕಾರ್ಮಿಕರಿಗೆ ಸರಕಾರದ ಮಾರ್ಗಸೂಚಿ ಪಾಲಿಸುವಂತೆ ತಿಳಿಸಿದ್ದೇನೆ. ನಾನು ಹಾಗೂ ಯುಎಸ್‌ಎಫ್‌ಸಿ ಜನರಿಗೆ ನೆರವಾಗಲಿದ್ದೇವೆ’’ ಎಂದು ಭುಟಿಯಾ ನುಡಿದರು.

 ಸಿಕ್ಕಿಂನಲ್ಲಿ ಈ ತನಕ ಕೊರೋನ ವೈರಸ್ ಪತ್ತೆಯಾಗಿಲ್ಲ. ಆದರೆ ಈ ರಾಜ್ಯದಲ್ಲಿ ಅಸಂಘಟಿತ ವಲಯದ ಕಾರ್ಮಿಕರು ಗುಂಪುಗುಂಪಾಗಿ ತಮ್ಮ ಊರಿಗೆ ವಾಪಸಾಗುತ್ತಿರುವುದರಿಂದ ಭೀತಿ ಆವರಿಸಿದೆ. ‘‘ಕಾರ್ಮಿಕರಿಗೆ ಪಡಿತರ ವಿತರಿಸುವಂತೆ ಸರಕಾರಕ್ಕೆ ತಿಳಿಸಿದ್ದೇನೆ. ನನ್ನ ಕ್ಲಬ್ ಮುಖಾಂತರ ಮತ್ತಷ್ಟು ಜನರಿಗೆ ನೆರವಾಗುವ ವಿಶ್ವಾಸದಲ್ಲಿದ್ದೇನೆ’’ ಎಂದು ಭುಟಿಯಾ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News