ಲಾಕ್ ಡೌನ್ ಉಲ್ಲಂಘಿಸಿದ ರಥಯಾತ್ರೆ ತಡೆದ ಪೊಲೀಸರು: ಕಲ್ಲುತೂರಾಟ ನಡೆಸಿದ ನೂರಾರು ಜನರಿದ್ದ ಗುಂಪು

Update: 2020-04-02 14:55 GMT

ಮಹಾರಾಷ್ಟ್ರ: ರಥಯಾತ್ರೆಯನ್ನು ತಡೆದ ಪೊಲೀಸರ ಮೇಲೆ ನೂರಾರು ಜನರಿದ್ದ ಗುಂಪು ಕಲ್ಲುತೂರಾಟ ನಡೆಸಿ, ಹಲ್ಲೆಗೈದ ಘಟನೆ ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದಿದೆ ಎಂದು timesnownews.com ವರದಿ ಮಾಡಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಈಗಾಗಲೇ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದ್ದು, ಸಾಮಾಜಿಕ ಅಂತರ ಕಾಪಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.  ಆದರೆ ಮಹಾರಾಷ್ಟ್ರದ ಸೋಲಾಪುರದಲ್ಲಿ ನೂರಾರು ಜನರು ರಥಯಾತ್ರೆಯಲ್ಲಿ ಹೊರಟಿದ್ದಾರೆ. ಲಾಕ್ ಡೌನ್ ನಿಯಮ ಉಲ್ಲಂಘಿಸಿದ ರಥಯಾತ್ರೆಯನ್ನು ತಡೆದ ಪೊಲೀಸರು ಜನರು ಮನೆಗೆ ವಾಪಸ್ ತೆರಳುವಂತೆ ವಿನಂತಿಸಿದ್ದಾರೆ. ಆದರೆ ಇದರಿಂದ ಆಕ್ರೋಶಗೊಂಡ ನೂರಾರು ಜನರಿದ್ದ ಗುಂಪು ಕಲ್ಲುತೂರಾಟ ನಡೆಸಿ ಪೊಲೀಸರ ಮೇಲೆ ದಾಳಿ ನಡೆಸಿದೆ ಎಂದು timesnownews.com ವರದಿ ತಿಳಿಸಿದೆ.

ಕೊರೋನವೈರಸ್ ಹಿನ್ನೆಲೆಯಲ್ಲಿ ರಥಯಾತ್ರೆಯನ್ನು ತಡೆಯಲಾಗಿದ್ದು, ಸಾಮಾಜಿಕ ಅಂತರ ಕಾಪಾಡುವಂತೆ ಜನರಿಗೆ ತಿಳಿಸಲಾಯಿತು. ಗುಂಪಿನಲ್ಲಿದ್ದವರು ಕಲ್ಲುತೂರಾಟ ನಡೆಸಿದರು ಎಂದು ಆರೋಪಿಸಲಾಗಿದೆ.

ಘಟನೆಯಿಂದ 6 ಪೊಲೀಸರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ 100 ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News