ಕೊರೋನ ವೈರಸ್ ಭೀತಿ: ತೇಲ್ತುಂಬ್ಡೆ, ನವ್ಲಾಖಾ ಬಂಧನ ವಿಳಂಬಕ್ಕೆ ಜಾಗತಿಕ ಚಿಂತಕರ ಆಗ್ರಹ

Update: 2020-04-02 15:53 GMT
ಆನಂದ್ ತೇಲ್ತುಂಬ್ಡೆ

ಹೊಸದಿಲ್ಲಿ, ಎ.2: ದೇಶಾದ್ಯಂತ ಕೊರೋನ ವೈರಸ್ ಹಾವಳಿ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಭೀಮಾಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಗಳಾಗಿರುವ ಸಾಮಾಜಿಕ ಹೋರಾಟಗಾರರಾದ ಆನಂದ್ ತೇಲ್ತುಂಬ್ಡೆ ಹಾಗೂ ಗೌತಮ್ ನವ್ಲಾಖಾ ಅವರ ಬಂಧನವನ್ನು ವಿಳಂಬಿಸಬೇಕೆಂದು ಕೋರಿ 15ಕ್ಕೂ ಅಧಿಕ ಸಾಮಾಜಿಕ ಹಕ್ಕುಗಳ ಸಂಘಟನೆಗಳು ಹಾಗೂ 5 ಸಾವಿರಕ್ಕೂ ಅಧಿಕ ಚಿಂತಕರು ಮಂಗಳವಾರ ಸಹಿ ಹಾಕಿದ್ದಾರೆ.

ಮಾನವಹ ಹಕ್ಕುಗಳ ಪ್ರತಿಪಾದಕ ಸಂಸ್ಥೆ ಇಂಡಿಯಾ ಸಿವಿಲ್‌ವಾಚ್ ಇಂಟರ್‌ನ್ಯಾಶನಲ್ ಈ ಉಪಕ್ರಮವನ್ನು ಕೈಗೊಂಡಿತ್ತು. ಸಾಹಿತಿ, ಚಿಂತಕ ರಾದನೋಮ್ ಚೋಮ್‌ಸ್ಕಿ, ಜೀನ್ ಡ್ರೇಝ್, ಆರುಂಧತಿ ರಾಯ್ ಹಾಗೂ ನಟಿ ಅಪರ್ಣಸೇನ್ ಸೇರಿದಂತೆ ಖ್ಯಾತನಾಮರು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.

ವೃದ್ಧಾಪ್ಯ ಹಾಗೂ ದೇಹಪರಿಸ್ಥಿತಿಯಿಂದಾಗಿ ನವ್ಲಾಖಾ ಹಾಗೂ ತೇಲ್ತುಂಬ್ಡೆ ಅವರು ಕೊರೋನ ವೈರಸ್ ಸೋಂಕಿಗೆ ಸುಲಭವಾಗಿ ತುತ್ತಾಗುವ ಅಪಾಯವಿದೆ. ಅನಾರೋಗ್ಯ ಪೀಡಿತ ಹಿರಿಯ ವಯೋಮಾನದ ವ್ಯಕ್ತಿಗಳಿಗೆ ಈ ಮಾರಕ ಸೋಂಕು ರೋಗ ತಗಲುವ ಹೆಚ್ಚು ಅಪಾಯವಿದೆ ಎಂದರು. ಈ ಹಿನ್ನೆಲೆಯಲ್ಲಿ ಇವರಿಬ್ಬರ ಬಂಧನವನ್ನು ವಿಳಂಬಿಸಬೇಕೆಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ತೇಲ್ತುಂಬ್ಡೆ ಹಾಗೂ ನವ್ಲಾಖಾ ಅವರು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ಮಾರ್ಚ್ 16ರಂದು ತಿರಸ್ಕರಿಸಿದ ಬಳಿಕ, ಅವರಿಬ್ಬರನ್ನು ಎಪ್ರಿಲ್ 6ರೊಳಗೆ ಬಂಧಿಸುವ ಸಾಧ್ಯತೆಯಿದೆ.

2018ರ ಜನವರಿ ಒಂದರಂದು ಪುಣೆ ಸಮೀಪದ ಭೀಮಾ ಕೋರೆಗಾಂವ್ ಗ್ರಾಮದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ತೇಲ್ತುಂಬ್ಡೆ ಹಾಗೂ ನವ್ಲಾಖಾ ವಿರುದ್ಧ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಮೊಕದ್ದಮೆ ದಾಖಲಿಸಲಾಗಿತ್ತು. ಅವರ ಪೈಕಿನವ್ಲಾಖಾ ವಿರುದ್ಧ ಮಾವೋವಾದಿಗಳ ಜೊತೆ ನಂಟು ಹೊಂದಿದ ಆರೋಪವನ್ನು ಕೂಡಾ ಹೊರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News