ಬಾಡಿಗೆ ಮನ್ನಾ ಯಾಕಿಲ್ಲ?

Update: 2020-04-04 17:43 GMT

ಅಸಂಖ್ಯ ಕೂಲಿ ಕಾರ್ಮಿಕರು ದುಡಿಮೆಯೂ ಇಲ್ಲದೆ, ದಿನಗೂಲಿಯೂ ಇಲ್ಲದೆ, ಹೊಟ್ಟೆಪಾಡಿಗೆ ವಲಸೆ ಬಂದಿದ್ದ ಶಹರವನ್ನು ತೊರೆದು ಕಾಲ್ನಡಿಗೆಯಲ್ಲೇ ತಮ್ಮ ತಮ್ಮ ಹಳ್ಳಿಗಳಿಗೆ ಮರಳುತ್ತಿದ್ದಾರೆ. ವ್ಯಾಪಿಸುತ್ತಿರುವ ಮಾರಕ ರೋಗದಿಂದ ಬದುಕುಳಿಯಲು ಅವರೆಲ್ಲರೂ ತಮ್ಮ ಬಡತನವನ್ನು ಒಪ್ಪಿಕೊಳ್ಳಬೇಕಾಗಿ, ಅಪ್ಪಿಕೊಳ್ಳಬೇಕಾಗಿ ಬಂದಿದೆ. ಅವರಲ್ಲಿ ಅನೇಕರಿಗೆ ತಮ್ಮ ಹಳ್ಳಿಯಲ್ಲೂ ಸ್ವಂತ ಮನೆಗಳಿಲ್ಲ. ಈಗಿನ ಪರಿಸ್ಥಿತಿ ಬೇಡುವ ಅಂತರ ಕಾಯ್ದುಕೊಳ್ಳಲು, ಶುಭ್ರತೆ ಕಾಪಾಡಿಕೊಳ್ಳಲು ಅವರೆಲ್ಲರೂ ತಾವು ಮರಳಿದ ಹಳ್ಳಿಗಳಲ್ಲೂ ಮನೆ ಬಾಡಿಗೆ ಕಟ್ಟಬೇಕು!



ಕೊರೋನ ಎಂಬ ಸರ್ವವ್ಯಾಪಿ ವ್ಯಾಧಿ ಜಗತ್ತಿನಾದ್ಯಂತ ಹಬ್ಬಿ ನಮ್ಮೆಲ್ಲರನ್ನೂ ನಡುಗಿಸಿದೆ. ನಮ್ಮ ದೇಶವೂ ಸೇರಿದಂತೆ ಹಲವು ದೇಶ ತನ್ನ ಮೇಲೆ ‘ಲಾಕ್‌ಡೌನ್’ ಹೇರಿಕೊಳ್ಳಬೇಕಾಗಿ ಬಂದಂತಹ ಈ ಸಂದರ್ಭದಲ್ಲಿ ನಮ್ಮ ನಡುವಿನ ಹಲವರ ಮುಂದೆ ತನ್ನ ತಲೆಯ ಮೇಲಿನ ಸೂರನ್ನು ಉಳಿಸಿಕೊಳ್ಳುವುದು ಮತ್ತು ತನ್ನ ಸಂಸಾರದ ಹೊಟ್ಟೆ ತುಂಬಿಸುವುದು - ಈ ಎರಡರ ನಡುವೆ ಒಂದನ್ನು ಆಯ್ದುಕೊಳ್ಳಬೇಕಾದ ಸಂದಿಗ್ಧತೆ ಎದುರಾಗಿದೆ.
 ಅಸಮಾನವಾದ ನಮ್ಮ ಸಮಾಜದಲ್ಲಿ, ಬಂಡವಾಳಶಾಹಿ ಶಕ್ತಿಗಳು ರೂಪಿಸಿದ ಈ ವ್ಯವಸ್ಥೆಯಲ್ಲಿ, ಹಿಂದೆಯೂ ಒಂದು ದೊಡ್ಡ ಪ್ರಮಾಣದ ಜನವರ್ಗವು ಮನೆ ಬಾಡಿಗೆ ಕಟ್ಟಲು ಹೆಣಗುತ್ತಿತ್ತು ಎಂಬುದು ನಿಜವೇ ಆದರೂ, ಈಗ ಈ ವೈರಾಣು ಹಬ್ಬಿರುವ ಸಮಯ ಉದ್ಭವಗೊಂಡಿರುವ ಪರಿಸ್ಥಿತಿ ಆ ಜನವರ್ಗವನ್ನು ಬಾಡಿಗೆ ಕಟ್ಟಲು ಅಶಕ್ತರನ್ನಾಗಿಸಿ ಜೀವಸಂಕಟಕ್ಕೆ ಸಿಲುಕಿಸಿದೆ.

 ಅಸಂಖ್ಯ ಕೂಲಿ ಕಾರ್ಮಿಕರು ದುಡಿಮೆಯೂ ಇಲ್ಲದೆ, ದಿನಗೂಲಿಯೂ ಇಲ್ಲದೆ, ಹೊಟ್ಟೆಪಾಡಿಗೆ ವಲಸೆ ಬಂದಿದ್ದ ಶಹರವನ್ನು ತೊರೆದು ಕಾಲ್ನಡಿಗೆಯಲ್ಲೇ ತಮ್ಮ ತಮ್ಮ ಹಳ್ಳಿಗಳಿಗೆ ಮರಳುತ್ತಿದ್ದಾರೆ. ವ್ಯಾಪಿಸುತ್ತಿರುವ ಮಾರಕ ರೋಗದಿಂದ ಬದುಕುಳಿಯಲು ಅವರೆಲ್ಲರೂ ತಮ್ಮ ಬಡತನವನ್ನು ಒಪ್ಪಿಕೊಳ್ಳಬೇಕಾಗಿ, ಅಪ್ಪಿಕೊಳ್ಳಬೇಕಾಗಿ ಬಂದಿದೆ. ಅವರಲ್ಲಿ ಅನೇಕರಿಗೆ ತಮ್ಮ ಹಳ್ಳಿಯಲ್ಲೂ ಸ್ವಂತ ಮನೆಗಳಿಲ್ಲ. ಈಗಿನ ಪರಿಸ್ಥಿತಿ ಬೇಡುವ ಅಂತರ ಕಾಯ್ದುಕೊಳ್ಳಲು, ಶುಭ್ರತೆ ಕಾಪಾಡಿಕೊಳ್ಳಲು ಅವರೆಲ್ಲರೂ ತಾವು ಮರಳಿದ ಹಳ್ಳಿಗಳಲ್ಲೂ ಮನೆ ಬಾಡಿಗೆ ಕಟ್ಟಬೇಕು!

ಹಳ್ಳಿಗಳಿಂದ, ಸಣ್ಣಪುಟ್ಟ ಊರುಗಳಿಂದ ಪಟ್ಟಣಗಳಿಗೆ ವಿದ್ಯಾಭ್ಯಾಸಕ್ಕೆಂದು ಹೋಗುವ ವಿದ್ಯಾರ್ಥಿಗಳೇ ಹೆಚ್ಚು. ಕೇವಲ ನಾಲ್ಕು ಗಂಟೆಗಳ ಮುನ್ಸೂಚನೆ ನೀಡಿ ಹೇರಲಾದ ‘ಲಾಕ್‌ಡೌನ್’ ಇವರಲ್ಲಿ ಅನೇಕರನ್ನು ಶಹರಗಳಲ್ಲೇ ಬಂದಿಯಾಗಿಸಿದೆ. ತಮ್ಮ ಆರೋಗ್ಯ, ಸುರಕ್ಷೆ, ಊಟ ತಿಂಡಿ ಇವುಗಳ ಪ್ರಶ್ನೆಗಳೊಂದಿಗೆ ಅವರ ಮುಂದೆ ಮನೆ/ರೂಂ ಬಾಡಿಗೆಯ ಪ್ರಶ್ನೆಯೂ ಇದೆ. ಈ ವಿದ್ಯಾರ್ಥಿ ಸಮೂಹದಲ್ಲಿ ದುಡಿಯುತ್ತ ಓದುವ ಯುವ ಜನರ ದೊಡ್ಡ ಸಂಖ್ಯೆಯೇ ಇದೆ ಎಂಬುದನ್ನು ಮರೆಯಲಾಗದು. ಅವರನ್ನೂ ಒಳಗೊಂಡು ಇತರ ವಿದ್ಯಾರ್ಥಿಗಳಿಗೆ ತಿಂಗಳ ಮನೆ/ರೂಂ ಬಾಡಿಗೆ ಈಗ ಮೊದಲಿಗಿಂತಲೂ ಬೃಹತ್‌ಗಾತ್ರದಲ್ಲಿ ಕಾಡಲಿದೆ. ಓದಲು ಬಂದ ಶಹರದಿಂದ ತಮ್ಮ ತಮ್ಮ ಊರಿಗೆ, ತಮ್ಮ ತಮ್ಮ ಮನೆಗೆ ಹೋಗಲು ಯಶಸ್ವಿಯಾದ ವಿದ್ಯಾರ್ಥಿಗಳೂ ಸಹ ಶಹರದಲ್ಲಿ ತಾವು ವಾಸವಾಗಿರುವ ಮನೆಗಳ, ರೂಂಗಳ ಬಾಡಿಗೆ ಕಟ್ಟಲೇ ಬೇಕು.

ಸಬ್ವೇ, ಅಡಿಡಾಸ್, ದಿ ಚೀಸ್ ಕೇಕ್ ಫ್ಯಾಕ್ಟರಿ ಮುಂತಾದ ಬೃಹತ್ ಕಂಪೆನಿಗಳು ತಾವು ಎಪ್ರಿಲ್ ತಿಂಗಳ ಬಾಡಿಗೆ ಕೊಡುವುದಿಲ್ಲ ಎಂದು ಘೋಷಿಸಿವೆ. ಲೋಕದ ಅಸಮಾನತೆ ಹೆಚ್ಚಿಸಿದ ಇಂತಹ ಕಂಪೆನಿಗಳು ತಿಂಗಳ ಬಾಡಿಗೆಗಳಿಂದ ತಮ್ಮನ್ನು ತಾವೇ ಮುಕ್ತಗೊಳಿಸಿಕೊಳ್ಳುತ್ತ್ತವೆ ಎಂದಾದರೆ, ಈ ವೈರಾಣು ತಂದಿಟ್ಟಿರುವ ಪರಿಸ್ಥಿತಿಯಲ್ಲಿ ಮತ್ತಷ್ಟು ದುರ್ಬಲರಾಗಿರುವ ಜನರು ಬಾಡಿಗೆ ಕೊಡಲು ಯಾಕೆ ನಿರಾಕರಿಸಬಾರದು? ಇಲ್ಲ ಬಾಡಿಗೆ ಮನ್ನಾ ಮಾಡಿ ಎಂದು ಯಾಕೆ ವಿನಂತಿಸಿಕೊಳ್ಳಬಾರದು?

 ಈ ವ್ಯವಸ್ಥೆ ದುರ್ಬಲರನ್ನಾಗಿಸಿದ ಜನಸಮೂಹ ಹೋರಾಟ ಆರಂಭಿಸಿದರೆ ಅವರನ್ನು ಈ ತನಕ ಬಗ್ಗಿಸುತ್ತಾ ಬಂದ ಮಾರುಕಟ್ಟೆ ನಿಯಂತ್ರಿತ ವ್ಯವಸ್ಥೆಯ ತರ್ಕವನ್ನು ಬುಡಮೇಲು ಮಾಡಬಹುದಾಗಿದೆ. ವಿಶ್ವದ ಅನೇಕ ಕಡೆಗಳಲ್ಲಿ ಇಂತಹ ಪ್ರಯತ್ನಗಳು ನಡೆಯುತ್ತಿವೆ ಎಂಬುದಕ್ಕೆ ರೆಂಟ್-ಸ್ಟ್ರೈಕ್-2020 ಒಂದು ಉದಾಹರಣೆ. ಅದೇ ಮಾದರಿಯ ಹೋರಾಟ ಭಾರತದಲ್ಲಿಯೂ ಕಟ್ಟುವ ಅಗತ್ಯ ಇದೆ. ಕೊರೋನ ಅಪಾಯ ಇರುವ ತನಕ, ಅಂತರ ಕಾಯ್ದುಕೊಳ್ಳಬೇಕಾದ ಅಗತ್ಯ ಇರುವ ತನಕ ತಿಂಗಳ ಬಾಡಿಗೆ ಮನ್ನಾ ಮಾಡಿ ಎಂದು ಒಕ್ಕೊರಳಲ್ಲಿ ಕೋರಲು, ತಿಂಗಳ ಬಾಡಿಗೆ ನೀಡೆವು ಎಂದು ಒಗ್ಗಟ್ಟಾಗಿ ಘೋಷಿಸಲು ಎಲ್ಲರೂ ಒಂದಾಗುವ ಸಾಧ್ಯತೆಗಳ ಕುರಿತು ಆಲೋಚಿಸಬಹುದೇ?

ಕೊನೆಯ ಮಾತು: ಇನ್ನೂ ವಿದ್ಯಾರ್ಥಿಯಾಗಿರುವ ನಾನು, ಈ ವಿಷಯದಲ್ಲಿ ತಜ್ಞಳಲ್ಲ. ನನ್ನ ತಿಳುವಳಿಕೆಗಳಿಗೆ ಮಿತಿಯಿದೆ ಎಂದು ಒಪ್ಪಿಕೊಳ್ಳುತ್ತೇನೆ. ಉಳಿದ ದೇಶದಲ್ಲಿ ರೆಂಟ್ ಸ್ಟ್ರೈಕ್ ಅನ್ನು ಕಾರ್ಯರೂಪಕ್ಕೆ ತಂದ ಮಾರ್ಗದ ಬಗ್ಗೆ ಮತ್ತು ಭಾರತದಲ್ಲಿ ಅದರ ಸಾಧ್ಯತೆಗಳ ಬಗ್ಗೆ ನನ್ನ ತಿಳುವಳಿಕೆ ಹೆಚ್ಚಿಸಿಕೊಳ್ಳಲು ನಿರಂತರವಾಗಿ ಈಗಲೂ ಓದುತ್ತಿದ್ದೇನೆ, ಸಂಶೋಧನೆ ನಡೆಸುತ್ತಿದ್ದೇನೆ. ನಾವೆಲ್ಲರೂ ಜೊತೆಗೂಡಿ ಇಂತಹ ಒಂದು ಹೆಜ್ಜೆ ತೆಗೆದುಕೊಳ್ಳುವುದೇ ಎಂದಾದರೆ, ಈ ದಿಕ್ಕಿನಲ್ಲಿ ಮುಂದೆ ಸಾಗುವುದೇ ಎಂದಾದರೆ ನಾವು ಎದುರಿಸಬೇಕಾದ ಅಡೆತಡೆಗಳ ಕುರಿತೂ ಯೋಚಿಸಬೇಕಾಗಿದೆ ಎಂದು ಬಲ್ಲೆ. ಈ ನಡೆಯ ಸಂದರ್ಭ ನಾವು ಹಿಂದೊದೆತ ತಿನ್ನಲೂಬಹುದು ಎಂಬುದು ತಿಳಿದಿದೆ. ಆದರೂ ಇಂತಹ ಒಂದು ಹೆಜ್ಜೆಯ ಅಗತ್ಯ ನನಗೆ ಕಾಣುವುದರ ಹಿಂದೆ ಇರುವ ಅರಿವು ಇಷ್ಟೇ. ಇಂತಹ ವಿಪತ್ತಿನ ಕಾಲದಲ್ಲಿ ಬಾಡಿಗೆ ವಸೂಲಿ ಮಾಡುವುದು ಅದೂ ದುರ್ಬಲರಿಂದ ಪರಾನುಭೂತಿ ಹೊಂದಿದ, ಹೃದಯವಂತ ಸಮಾಜದ ಲಕ್ಷಣವಲ್ಲ.

Writer - ನೇಹಾ ದೇಸಾಯಿ, ಕೊಲ್ಹಾಪುರ

contributor

Editor - ನೇಹಾ ದೇಸಾಯಿ, ಕೊಲ್ಹಾಪುರ

contributor

Similar News