ಕೊರೋನ ವೈರಸ್ ಸೋಂಕಿತ ಭಾರತೀಯರಲ್ಲಿ ಯುವಕರೇ ಅಧಿಕ!

Update: 2020-04-05 03:43 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಭಾರತದಲ್ಲಿ ಕೊರೋನ ವೈರಸ್ ಸೋಂಕಿತರ ಪೈಕಿ ಶೇಕಡ 83ರಷ್ಟು ಮಂದಿ 60 ವರ್ಷಕ್ಕಿಂತ ಕೆಳಗಿನವರು. ಅದರಲ್ಲೂ ಬಹುತೇಕ ಮದಿ (41%) 21-40 ವರ್ಷ ವಯೋಮಿತಿಯವರು ಎಂಬ ಆತಂಕಕಾರಿ ಅಂಕಿ ಅಂಶ ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಹಿರಿಯ ನಾಗರಿಕರು ಈ ಸೋಂಕಿಗೆ ತುತ್ತಾಗುವ ಅಪಾಯ ಅಧಿಕ ಎನ್ನುವುದು ತಜ್ಞರ ಅಭಿಮತ. ಆದರೆ ಭಾರತದಲ್ಲಿ ಮಾತ್ರ ಸೋಂಕಿತರ ಪೈಕಿ ಶೇಕಡ 17ರಷ್ಟು ಮಂದಿ ಮಾತ್ರ ಹಿರಿಯ ನಾಗರಿಕರು. ಆದ್ದರಿಂದ ಹಿರಿಯ ನಾಗರಿಕರು ಮಾತ್ರವಲ್ಲದೇ ಯುವಜನತೆಗೆ ಕೂಡಾ ಈ ಸೋಂಕು ಬಾಧಿಸಬಲ್ಲದು ಎನ್ನುವುದು ಸ್ಪಷ್ಟವಾಗಿದೆ. ವೃತ್ತಿಪರರು ಮತ್ತು ವಿದ್ಯಾರ್ಥಿಗಳು ಅಧಿಕ ಪ್ರಮಾಣದಲ್ಲಿ ಸೋಂಕಿಗೆ ತುತ್ತಾಗುವ ಅಪಾಯ ಇದೆ.

ಆದಾಗ್ಯೂ ಸೋಂಕಿನಿಂದ ಸಾಯುವವರಲ್ಲಿ ವೃದ್ಧರೇ ಅಧಿಕ ಎಂದು ತಜ್ಞರು ಹೇಳುತ್ತಾರೆ. ಭಾರತದಲ್ಲಿ ಸೋಂಕಿನಿಂದ ಮೃತಪಟ್ಟವರಲ್ಲಿ ಬಹಳಷ್ಟು ಮಂದಿ ಮಧುಮೇಹ, ಹೃದ್ರೋಗ ಮತ್ತು ಹೈಪರ್‌ಟೆನ್ಷನ್‌ನಂಥ ಕಾಯಿಲೆಗಳಿಂದ ಬಳಲುತ್ತಿದ್ದವರು ಎಂದು ಅವರು ಅಭಿಪ್ರಾಯಪಡುತ್ತಾರೆ.

ಭಾರತದಲ್ಲಿ ಇದುವರೆಗೆ ಸೋಂಕು ತಗುಲಿದ ವ್ಯಕ್ತಿಗಳ ವಯಸ್ಸನ್ನು ವಿಶ್ಲೇಷಿಸಿದಾಗ ಶೇಕಡ 8.61ರಷ್ಟು ಮಂದಿ 0-20 ವರ್ಷ ವಯೋಮಿತಿಯವರು, 41.88% 21-40 ವರ್ಷ ವಯೋಮಿತಿಯವರು, 32.82% 41-60 ವರ್ಷ ವಯಸ್ಸಿನವರು ಹಾಗೂ 16.69% ಮಂದಿ 60 ವರ್ಷ ಮೇಲ್ಪಟ್ಟವರು ಎಂದು ತಿಳಿದುಬರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News