​ಭಾರತದಲ್ಲಿ ಕೊರೋನಗೆ ಬಲಿಯಾದವರು 97 ಮಂದಿ

Update: 2020-04-05 04:21 GMT

ಹೊಸದಿಲ್ಲಿ : ದೇಶದಲ್ಲಿ ಒಂದೇ ದಿನ 586 ಮಂದಿಗೆ ಕೊರೋನ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಂತೆಯೇ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 100ರ ಸನಿಹ (ನಿಖರವಾಗಿ 97) ತಲುಪಿದೆ.

ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಅತ್ಯಧಿಕ ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತಿದ್ದು, ಶನಿವಾರ ಒಂದೇ ದಿನ 145 ಹೊಸ ಪ್ರಕರಣಗಳು ದೃಢಪಟ್ಟಿವೆ. ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 635ನ್ನು ತಲುಪಿದೆ. ತಮಿಳುನಾಡು (485) ಮತ್ತು ದೆಹಲಿ (445) ನಂತರದ ಸ್ಥಾನಗಳಲ್ಲಿವೆ.

ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 6, ತಮಿಳುನಾಡು ಹಾಗೂ ಮಧ್ಯಪ್ರದೇಶದಲ್ಲಿ ತಲಾ 2 ಹಾಗೂ ರಾಜಸ್ಥಾನದಲ್ಲಿ ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ರಾಜ್ಯಗಳಿಂದ ಬಂದ ಅಂಕಿ ಅಂಶಗಳ ಪ್ರಕಾರ ಒಟ್ಟು ಸೋಂಕಿತರ ಸಂಖ್ಯೆ 3670. ಈ ಪೈಕಿ 226 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಆರೋಗ್ಯ ಸಚಿವಾಲಯ ಒಟ್ಟು 3072 ಪ್ರಕರಣಗಳನ್ನು ಮತ್ತು 75 ಸಾವನ್ನು ದೃಢಪಡಿಸಿದೆ.

ದೆಹಲಿಯ 445 ಪಾಸಿಟಿವ್ ಪ್ರಕರಣಗಳಲ್ಲಿ 15 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಂಟು ಮಂದಿಗೆ ಕೃತಕ ಉಸಿರಾಟದ ಬೆಂಬಲದೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಮೃತಪಟ್ಟವರಲ್ಲಿ 36 ವರ್ಷದ ಒಬ್ಬರು ಸೇರಿದ್ದು, ಉಳಿದವರು 60 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು.

ಮಧ್ಯಪ್ರದೇಶದಲ್ಲಿ ಕೋವಿಡ್-19 ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಮತ್ತೊಬ್ಬ ಹಿರಿಯ ಐಎಎಸ್ ಅಧಿಕಾರಿಗೆ ಶನಿವಾರ ಸೋಂಕು ತಗುಲಿರುವುದು ದೃಢಪಟ್ಟಿದೆ. ಶುಕ್ರವಾರ ರಾಜ್ಯದ ಕೊರೋನ ಕಾರ್ಯಪಡೆಯ ಮುಖ್ಯಸ್ಥರಾಗಿದ್ದ ಐಎಎಸ್ ಅಧಿಕಾರಿಯೊಬ್ಬರಿಗೆ ಸೋಂಕು ತಗುಲಿತ್ತು.

ತಮಿಳುನಾಡಿನಲ್ಲಿ ಶನಿವಾರ ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದು, ರಾಜ್ಯದಲ್ಲಿ ಒಟ್ಟು ಮೂವರು ಸೋಂಕಿಗೆ ಬಲಿಯಾದಂತಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 485ಕ್ಕೇರಿದೆ. ರಾಜಸ್ಥಾನದಲ್ಲಿ 25 ಹೊಸ ಪ್ರಕರಣ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 200ರ ಗಡಿ ದಾಟಿದೆ. ಕರ್ನಾಟಕದಲ್ಲಿ ಇಬ್ಬರು ಮಹಿಳೆಯರಿಗೆ ಸೇರಿದಂತೆ ಒಂದೇ ದಿನ 16 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 144ಕ್ಕೇರಿದೆ. ಮೈಸೂರಿನಲ್ಲಿ 7, ಬೆಂಗಳೂರಿನಲ್ಲಿ 5, ದಕ್ಷಿಣ ಕನ್ನಡದಲ್ಲಿ 2, ಉಡುಪಿ ಹಾಗೂ ಬಳ್ಳಾರಿಯಲ್ಲಿ ತಲಾ 1 ಪ್ರಕರಣ ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News