'ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತದೆ': ಏರ್ ಇಂಡಿಯಾಗೆ ಪಾಕ್ ವಾಯುಸಂಚಾರ ನಿಯಂತ್ರಣ ವಿಭಾಗ ಮೆಚ್ಚುಗೆ

Update: 2020-04-05 12:56 GMT

ಹೊಸದಿಲ್ಲಿ: ವಿಶ್ವಾದ್ಯಂತ ಕೊರೋನ ಸಾಂಕ್ರಾಮಿಕ ಹರಡಿರುವ ನಡುವೆಯೇ ಏರ್ ಇಂಡಿಯಾ ಪರಿಹಾರ ಸಾಮಗ್ರಿಗಳನ್ನು ಸರಬರಾಜು ಮಾಡುವ ಸಲುವಾಗಿ ಮತ್ತು ಜನರ ಸ್ಥಳಾಂತರಕ್ಕಾಗಿ ವಿಮಾನ ಕಾರ್ಯಾಚರಣೆ ಕೈಗೊಂಡಿರುವುದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತೀಚೆಗೆ ಪಾಕಿಸ್ತಾನ ಕೂಡಾ ಏರ್ ಇಂಡಿಯಾ ಕಾರ್ಯಾಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು NDTV ವರದಿ ಮಾಡಿದೆ.

ಪಾಕಿಸ್ತಾನದ ವಾಯು ಸಂಚಾರ ನಿಯಂತ್ರಣ ವಿಭಾಗ ಏರ್ ಇಂಡಿಯಾ ವಿಮಾನಗಳನ್ನು ತನ್ನ ವಾಯುಪ್ರದೇಶದ ಮೂಲಕ ಹಾರಾಡಲು ಅನುವು ಮಾಡಿಕೊಟ್ಟಿರುವುದು ಮಾತ್ರವಲ್ಲದೇ, ಈ ಅನಿಶ್ಚಿತ ಸಂದರ್ಭದಲ್ಲಿ ಏರ್ ಇಂಡಿಯಾ ಕೈಗೊಂಡಿರುವ ಕಾರ್ಯವನ್ನು ಶ್ಲಾಘಿಸಿದೆ.

ಏಪ್ರಿಲ್ 2ರಂದು ಏರ್ ಇಂಡಿಯಾದ ಎರಡು ವಿಮಾನಗಳು ಮುಂಬೈನಿಂದ ಜರ್ಮನಿಯ ಫ್ರಾಂಕ್‍ ಫರ್ಟ್‍ಗೆ ಪ್ರಯಾಣ ಬೆಳೆಸಿದವು. ಇದರಲ್ಲಿ ಪರಿಹಾರ ಸಾಮಗ್ರಿ ಒಯ್ಯಲಾಗಿದ್ದು, ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 24ರಂದು ಘೋಷಿಸಿದ ಲಾಕ್‍ ಡೌನ್‍ ನಂತರ ಸಿಕ್ಕಿಹಾಕಿಕೊಂಡ ಯೂರೋಪಿಯನ್ನರನ್ನು ಕೂಡಾ ಕರೆದೊಯ್ಯಲಾಯಿತು.

"ವಿಮಾನ ಮಧ್ಯಾಹ್ನ 2:30ಕ್ಕೆ ಮುಂಬೈನಿಂದ ಟೇಕಾಫ್‍ ಆಗಿದ್ದು, ಪಾಕಿಸ್ತಾನದ ವಾಯುಪ್ರದೇಶವನ್ನು ಸಂಜೆ 5ರ ವೇಳೆಗೆ ತಲುಪಿದೆ. ನಾವು ಅಲ್ಲಿನ ವಾಯುಸಂಚಾರ ನಿಯಂತ್ರಣ ವಿಭಾಗ ಸಂಪರ್ಕಿಸಲು ಪ್ರಯತ್ನಿಸಿದೆವು. ಆದರೆ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ ನಾವು ತರಂಗಾಂತರ ಬದಲಿಸಿ ಎಟಿಸಿ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾದೆವು" ಎಂದು ಏರ್‍ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.

ಪಾಕಿಸ್ತಾನದ ಎಟಿಸಿ ಪ್ರತಿಕ್ರಿಯೆ ಏರ್ ಇಂಡಿಯಾ ಪೈಲಟ್‍ ಗಳಿಗೆ ಅಚ್ಚರಿ ತಂದಿತು. “ಏರ್‍ಇಂಡಿಯಾದ ಪರಿಹಾರ ವಿಮಾನವನ್ನು ಕರಾಚಿ ಕಂಟ್ರೋಲ್ ಸ್ವಾಗತಿಸುತ್ತಿದೆ. ನೀವು ಫ್ರಾಂಕ್‍ ಫರ್ಟ್‍ ಗೆ ಪರಿಹಾರ ಕಾರ್ಯಾಚರಣೆ ಮಾಡುತ್ತಿದ್ದೀರಿ ಎನ್ನುವುದನ್ನು ಖಾತರಿಪಡಿಸಿಕೊಳ್ಳುತ್ತಿದ್ದೇವೆ" ಎಂದು ಹೇಳಿದಾಗ ಅದಕ್ಕೆ ಪೈಲಟ್ ಉತ್ತರಿಸಿದರು. "ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ವಿಮಾನ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಹೆಮ್ಮೆ ಇದೆ. ಒಳ್ಳೆಯದಾಗಲಿ" ಎಂದು ಎಟಿಸಿ ಸಿಬ್ಬಂದಿ ಹಾರೈಸಿದರು ಎಂದು NDTV ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News