ಕೋವಿಡ್ 19 ವಿರುದ್ಧದ ಹೋರಾಟಕ್ಕೆ ದೇಣಿಗೆ: OLXನಲ್ಲಿ ಏಕತೆಯ ಪ್ರತಿಮೆ 'ಮಾರಾಟಕ್ಕೆ'!

Update: 2020-04-05 15:04 GMT

ಹೊಸದಿಲ್ಲಿ: ವಿಶ್ವದ ಅತಿ ಎತ್ತರದ ಪ್ರತಿಮೆಯಾದ ಗುಜರಾತ್ ನಲ್ಲಿರುವ 'ಏಕತೆಯ ಪ್ರತಿಮೆ'ಯನ್ನು ಒಎಲ್ ಎಕ್ಸ್ ನಲ್ಲಿ ಮಾರಾಟಕ್ಕಿಡಲಾಗಿದೆ.... !. ವಿಚಿತ್ರ ಎನಿಸಿದರೂ ಇದು ಸತ್ಯ. ಒಎಲ್ ಎಕ್ಸ್ ನಲ್ಲಿ 'ಏಕತೆಯ ಪ್ರತಿಮೆ'ಯನ್ನು ಮಾರಾಟಕ್ಕಿಟ್ಟಿರುವುದನ್ನು ಕಂಡ ಹಲವರು ರಿಪೋರ್ಟ್ ಮಾಡಿದ ಬಳಿಕ ಇದನ್ನು ತೆಗೆದು ಹಾಕಲಾಗಿದೆ.

ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಂಬಂಧಿತ ಸಾಮಗ್ರಿಗಳನ್ನು ಖರೀದಿಗೆ ದಾನ ನೀಡಲು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು 30 ಸಾವಿರ ಕೋಟಿ ರೂ.ಗೆ ಮಾರಾಟಕ್ಕಿಡಲಾಗಿತ್ತು. "ತುರ್ತು ಅಗತ್ಯ ! ಆಸ್ಪತ್ರೆ ಮತ್ತು ಆರೋಗ್ಯ ಸಂಬಂಧಿ ಸಾಮಗ್ರಿಗಳ ಖರೀದಿಗೆ ಏಕತೆಯ ಪ್ರತಿಮೆಯನ್ನು ಮಾರಾಟಕ್ಕಿಡಲಾಗಿದೆ" ಎಂದು ಡಿಸ್ಕ್ರಿಪ್ಶನ್ ನಲ್ಲಿ ಬರೆಯಲಾಗಿತ್ತು.

ಈ ಬಗ್ಗೆ ವರದಿಯಾದ ಬಳಿಕ ಸಂಬಂಧಿತ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

"ಸರಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಅಪರಿಚಿತ ವ್ಯಕ್ತಿಯೊಬ್ಬ ಒಎಲ್ ಎಕ್ಸ್ ನಲ್ಲಿ ಈ ಕೃತ್ಯ ಎಸಗಿದ್ದಾನೆ. ಈ ಬಗ್ಗೆ ದೂರು ಸ್ವೀಕರಿಸಲಾಗಿದ್ದು, ಎಫ್ ಐಆರ್ ದಾಖಲಿಸಲಿದ್ದೇವೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News