ಲಾಕ್‌ಡೌನ್ ಹಿನ್ನೆಲೆ: ಗಂಗಾ, ಯಮುನಾ ನದಿ ನೀರಿನ ಗುಣಮಟ್ಟ ಸುಧಾರಣೆ

Update: 2020-04-05 17:52 GMT

ಹೊಸದಿಲ್ಲಿ, ಎ.5: ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿದ ಬಳಿಕ ದಿಲ್ಲಿ- ಎನ್‌ಸಿಆರ್(ರಾಷ್ಟ್ರೀಯ ರಾಜಧಾನಿ ವಲಯ) ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಕೈಗಾರಿಕಾ ಘಟಕಗಳನ್ನು ಮುಚ್ಚಿರುವ ಹಿನ್ನೆಲೆಯಲ್ಲಿ ಯಮುನಾ ನದಿ ನೀರಿನ ಗುಣಮಟ್ಟ ಗಮನಾರ್ಹ ಸುಧಾರಿಸಿದೆ ಎಂದು ದಿಲ್ಲಿ ಜಲಮಂಡಳಿಯ ಉಪಾಧ್ಯಕ್ಷ ರಾಘವ್ ಛಡ್ಡಾ ಹೇಳಿದ್ದಾರೆ.

ಲಾಕ್‌ಡೌನ್ ಘೋಷಿಸಿದ ಬಳಿಕ ಹಲವು ಕೈಗಾರಿಕೆಗಳು ಮತ್ತು ಕಚೇರಿಗಳನ್ನು ಮುಚ್ಚಿದ್ದು ಕೈಗಾರಿಕೆಗಳ ವಿಷಕಾರಿ ತ್ಯಾಜ್ಯ ಮತ್ತು ಮಲಿನ ದ್ರವ ನದಿ ನೀರಿಗೆ ಸೇರುವ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈಗ ಯಮುನಾ ನದಿ ನೀರು ಶುಭ್ರವಾಗಿ ಕಾಣುತ್ತದೆ ಎಂದು ಛಡ್ಡಾ ಹೇಳಿದ್ದಾರೆ.

ಸರಕಾರ ಮತ್ತು ಜನತೆ ಕೈಜೋಡಿಸಿದರೆ ಯಮುನಾ ನದಿ ನೀರಿನ ಗುಣಮಟ್ಟವನ್ನು ಸುಲಭವಾಗಿ ಸುಧಾರಿಸಬಹುದು ಎಂಬುದು ಖಾತ್ರಿಯಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಯಮುನಾ ನದಿ ನೀರನ್ನು ಶುದ್ಧಗೊಳಿಸುವುದಾಗಿ ನಾವು ಭರವಸೆ ನೀಡಿದ್ದೇವೆ. ಇದು ಸಾಧ್ಯ ಎಂಬುದನ್ನು ಲಾಕ್‌ಡೌನ್ ತೋರಿಸಿಕೊಟ್ಟಿದೆ. ಆದರೆ ಯಾವಾಗಲೂ ಲಾಕ್‌ಡೌನ್ ಸಾಧ್ಯವಿಲ್ಲವಾದ್ದರಿಂದ ಸರಕಾರದೊಂದಿಗೆ ಜನರೂ ಕೈಜೋಡಿಸಿದರೆ ಈ ಕಾರ್ಯ ಯಶಸ್ವಿಯಾಗುತ್ತದೆ ಎಂದವರು ಹೇಳಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಗಂಗಾ ನದಿಯ ನೀರಿನ ಗುಣಮಟ್ಟದಲ್ಲೂ ಗಮನಾರ್ಹ ಸುಧಾರಣೆಯಾಗಿದೆ. ಗಂಗಾ ನದಿ ನೀರಿಗೆ ಸೇರ್ಪಡೆಯಾಗುವ ಮಾಲಿನ್ಯದಲ್ಲಿ 10ನೇ ಒಂದು ಅಂಶ ಕೈಗಾರಿಕೆಗಳಿಂದ ಬರುತ್ತದೆ. ಈಗ ಕೈಗಾರಿಕೆಗಳು ಮುಚ್ಚಿರುವುದರಿಂದ ನದಿ ನೀರಿನ ಗುಣಮಟ್ಟದಲ್ಲಿ ಸುಮಾರು 40%ದಷ್ಟು ಸುಧಾರಣೆ ಕಂಡುಬಂದಿದೆ ಎಂದು ಬನಾರಸ್ ಹಿಂದು ಯುನಿವರ್ಸಿಟಿ ಐಐಟಿಯ ಪ್ರೊಫೆಸರ್ ಡಾ ಪಿಕೆ ಮಿಶ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News